ವಿಶ್ವಸಂಸ್ಥೆ, ಜು 25 (Daijiworld News/MSP): ಭಯೋತ್ಪಾದನೆ ಕುರಿತಂತೆ ಎಚ್ಚರಿಸುವಂತಹ ವರದಿಯೊಂದನ್ನು ವಿಶ್ವಸಂಸ್ಥೆ ನೀಡಿದ್ದು, ಇದರಲ್ಲಿ " ಭಾರತದ ರಾಜ್ಯಗಳಾದ ಕರ್ನಾಟಕ ಮತ್ತು ಕೇರಳದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಐಸಿಸ್ ಭಯೋತ್ಪಾದಕರು ನೆಲೆ ಕಂಡುಕೊಂಡಿದ್ದಾರೆ " ಎಂದು ಹೇಳಿದೆ.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್ ದೇಶಗಳಲ್ಲಿ ಬೇರುಬಿಟ್ಟಿರುವ ಸುಮಾರು 150ರಿಂದ 200 ಅಲ್ ಖೈದಾ, ಐಸಿಸ್ ಭಯೋತ್ಪಾದಕರು ದಾಳಿ ನಡೆಸಲು ಸೂಕ್ತ ಸಮಯಕ್ಕಾಗಿ ಹೊಂಚು ಹಾಕುತ್ತಿದ್ದಾರೆ ಎಂದು ವರದಿ ಎಚ್ಚರಿಕೆ ನೀಡಿದೆ.
ಅನಾಲಿಟಿಕಲ್ ಸಪೋರ್ಟ್ ಅಂಡ್ ಸ್ಯಾಂಕ್ಷನ್ಸ್ ಮಾನಿಟರಿಂಗ್ ತಂಡದ 26ನೇ ವರದಿಯಲ್ಲಿ ಐಸಿಸ್, ಅಲ್ ಖೈದಾ ಮತ್ತು ಅದರ ಇತರ ಸಹಭಯೋತ್ಪಾದಕ ಗುಂಪುಗಳು ಸಕ್ರಿಯವಾಗಿದೆ. ಮಾತ್ರವಲ್ಲದೆ ಅಲ್ ಖೈದಾ ಆಫ್ಘಾನಿಸ್ತಾನದ ನಿಮ್ರುಝ್, ಹೆಲ್ಮಾಂಡ್ ಮತ್ತು ಕಂದಹಾರ್ ಪ್ರಾಂತ್ಯಗಳಿಂದ ತಾಲಿಬಾನ್ ಕೈಕೆಳಗೆ ಕೆಲಸ ಮಾಡುತ್ತಿದೆ ಎಂದು ಹೇಳಿದೆ. ಇದು ಸುಮಾರು 150 ರಿಂದ 200 ಸದಸ್ಯರನ್ನು ಹೊಂದಿದೆ ಎಂದು ವರದಿ ತಿಳಿಸಿದೆ
ಅಲ್ ಖೈದಾ ಗುಂಪಿನ ನಾಯಕ ಆಸಿಮ್ ಉಮರ್ ಮೃತಪಟ್ಟ ನಂತರ ಇದರ ನಾಯಕತ್ವವನ್ನು ಭಾರತದಲ್ಲಿ ಒಸಮಾ ಮಹಮ್ಮೂದ್ ವಹಿಸಿಕೊಂಡಿದ್ದಾನೆ. ಈತ ಮಾಜಿ ನಾಯಕನ ಸಾವಿಗೆ ಪ್ರತೀಕಾರದ ಕಾರ್ಯಾಚರಣೆಯನ್ನು ಯೋಜಿಸುತ್ತಿದ್ದಾನೆ ಎಂದು ವರದಿ ಮಾಡಿದೆ.