ಜರ್ಮನಿ, ಆ 02 (DaijiworldNews/PY): ವಂಚನೆಯ ಕಥೆಗಳು ಕೇಳಿದ ತಕ್ಷಣ ನಮಗೆ ನೆನಪಾಗುವ ಪ್ರಾಣಿಯೇ ನರಿ. ತನ್ನ ಕುತಂತ್ರ ಬುದ್ದಿಯಿಂದ ಹೇಗೆ ಪಾರಾಗುತ್ತದೆ ಎನ್ನುವುದನ್ನು ನಾವು ಕಥೆಗಳಿಂದ ತಿಳಿದುಕೊಂದಿದ್ದೇವೆ. ಆದರೆ, ನರಿಯೊಂದು ಪಾದರಕ್ಷೆಗಳನ್ನು ಕದ್ದು ಸುದ್ದಿಯಾಗಿರುವ ಘಟನೆ ಜರ್ಮನಿಯ ಬರ್ಲಿನ್ ಬಳಿಯ ಝಾಲೆಂಡ್ರಾಫ್ ಎಂಬಲ್ಲಿ ನಡೆದಿದೆ.
ಈ ನರಿಗೆ ಚಪ್ಪಲಿ, ಶೂಗಳೆಂದರೆ ಇಷ್ಟ. ಹಾಗಾಗಿ ಇದು ನೂರಕ್ಕೂ ಅಧಿಕ ಶೂ, ಕ್ರಾಕ್ಸ್, ಫ್ಲಿಪ್-ಫ್ಲಾಪ್ಸ್ ಸೇರಿದಂತೆ ಹಲವಾರು ಶೂ, ಚಪ್ಪಲಿಗಳನ್ನು ಕದ್ದೊಯ್ದು ಬಚ್ಚಿಟ್ಟುಕೊಂಡಿದೆ ಎನ್ನಲಾಗಿದೆ.
ಝಾಲೆಂಡ್ರಾಫ್ ಪ್ರದೇಶದಲ್ಲಿನ ನಿವಾಸಿಗಳ ಚಪ್ಪಲಿಗಳು ಏಕಾಏಕಿ ಕಾಣೆಯಾಗುತ್ತಿರುವುದನ್ನು ತಿಳಿದ ನಿವಾಸಿಗಳು ಕಳ್ಳರು ಚಪ್ಪಲಿಗಳನ್ನು ಕದಿಯುತ್ತಿದ್ದಾರೆ ಎಂದು ಅಂದುಕೊಂಡಿದ್ದರು. ಈ ಕಾರಣದಿಂದ ತಮ್ಮ ಪಾದರಕ್ಷಣೆಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಅವರು ವ್ಯವಸ್ಥೆ ಮಾಡಲು ಪ್ರಾರಂಭ ಮಾಡಿದರು.
ಕ್ರಿಶ್ಚಿಯನ್ ಮೇಯರ್ ಎಂಬುವವರು ಹೊಸದಾಗಿ ಖರೀದಿ ಮಾಡಿದ್ದ ಶೂಗಳು ಮಾರನೇ ದಿನ ಕಾಣೆಯಾಗಿದ್ದು, ಈ ಬಗ್ಗೆ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ಚಪ್ಪಲಿ ಕದಿಯುವ ಕಳ್ಳನನ್ನು ಹಿಡಿಯಲು ಸಹಾಯ ಮಾಡುವಂತೆ ಕೋರಿದ್ದರು. ಇವರು ಮಾಡಿರುವ ಪೋಸ್ಟ್ಗೆ ಪ್ರತಿಕ್ರಿಯಿಸಿದ ಹಲವಾರು ಮಂದಿ ತಮ್ಮ ಶೂ, ಚಪ್ಪಲಿಗಳು ಕಾಣೆಯಾಗಿರುವ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ, ಕಳ್ಳನನ್ನು ಹಿಡಿಯಲು ಏನಾದರೂ ಉಪಾಯ ಇದೆಯೇ ಎನ್ನುವ ಬಗ್ಗೆ ಸಲಹೆ ನೀಡುವಂತೆ ತಿಳಿಸಿದ್ದಾರೆ.
ಚಪ್ಪಲಿ ಕಳ್ಳನನ್ನು ಹಿಡಿಯುವ ಸಲುವಾಗಿ ಮೇಯರ್ ಉಪಾಯ ಹೂಡುತ್ತಿರುವ ಸಂದರ್ಭ, ಯಾವುದೋ ಒಂದು ಪ್ರಾಣಿ ಚಪ್ಪಲಿ ಕಚ್ಚಿಕೊಂಡು ಪೊದೆಯೊಳಗೆ ಹೋಗುತ್ತಿರುವುದನ್ನು ನೋಡಿದ ವ್ಯಕ್ತಿಯೋರ್ವ ಮೇಯರ್ ಅವರಿಗೆ ಈ ವಿಚಾರವನ್ನು ಹೇಳಿದ್ದಾರೆ. ಮರುದಿವಸ ಮೇಯರ್ ಅವರು ಆ ಪ್ರಾಣಿ ಯಾವುದು ಎಂದು ಪತ್ತೆ ಹಚ್ಚುವ ಸಲುವಾಗಿ ಶೋಧನೆ ಪ್ರಾರಂಭಿಸಿದ್ದರು.
ಒಂದು ದಿನ ನರಿಯೊಂದು ಬಾಯಲ್ಲಿ ಪಾದರಕ್ಷೆಯನ್ನು ಕಚ್ಚಿಕೊಂಡು ಹೋಗುತ್ತಿರುವುದನ್ನು ಕಂಡ ಮೇಯರ್, ಕೂಡಲೇ ಆ ಪ್ರಾಣಿಯನ್ನು ಹಿಂಬಾಲಿಸಿದ್ದು, ಪ್ರಾಣಿ ಪೊದೆಯಿಂದ ಹೊರಕ್ಕೆ ಬರುತ್ತದೆಯೇ ಎಂದು ಕಾದು ಕುಳಿತ ಅವರು ಬಳಿಕ ಪೊದೆಯನ್ನು ಪರಿಶೀಲಿಸಿದಾಗ ನೂರಕ್ಕೂ ಅಧಿಕ ಪಾದರಕ್ಷೆಗಳು ಕಂಡುಬಂದಿವೆ.
ಚಪ್ಪಲಿ ಕಳ್ಳನನ್ನು ಪತ್ತೆ ಹಚ್ಚಿದ ಮೇಯರ್ ಫೋಟೋವನ್ನು ಸಾಮಾಜಿ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನರಿ ಮಾಡಿರುವ ಚಪ್ಪಲಿ ಸಂಗ್ರಹದಲ್ಲಿ ನನ್ನ ಶೂ ಕಾಣಲಿಲ್ಲ ಎಂದು ಬೇಸರಗೊಂಡಿದ್ದಾರೆ. ಈ ಫೋಟೋಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, ಆ ನರಿ ಬಹುಶಃ ಹೆಣ್ಣು ನರಿಯಾಗಿರಬಹುದು. ತನ್ನ ಮರಿಗಳನ್ನು ಕಳೆದುಕೊಂಡಿರುವ ಕಾರಣ ಆ ನಷ್ಟವನ್ನು ಭರಿಸುವ ಸಲುವಾಗಿ ಚಪ್ಪಲಿಗಳನ್ನು ಕೊಂಡೊಯ್ಯುತ್ತಿರಬಹುದು ಎಂದಿದ್ದಾರೆ.
ಇದಕ್ಕೆ ಪಶು ವೈದ್ಯರೊಬ್ಬರು ಪ್ರತಿಕ್ರಿಯಿಸಿದ್ದು, ರೆಸ್ಕ್ಯೂ ಟೆರಿಯರ್ ನಾಯಿಯೊಂದನ್ನು ನಾವು ಸಾಕಿದ್ದೆವು. ಅದು ತನ್ನ ಮರಿಗಳನ್ನು ಕಳೆದುಕೊಂಡಿತ್ತು. ಹಾಗಾಗಿ ಆ ನಾಯಿ ಮನೆಯಲ್ಲಿರುವ ಕನ್ನಡಕದ ಡಬ್ಬಗಳನ್ನು ಮಾತ್ರವೇ ಕೊಂಡೊಯ್ಯುತ್ತಿತ್ತು. ಪ್ರಾಣಿಗಳು ಸಾಮಾನ್ಯವಾಗಿ ತಾವೇನಾದರೂ ಕಳೆದುಕೊಂಡಲ್ಲಿ ಅದನ್ನು ಭರಿಸಿಕೊಳ್ಳುವ ಸಲುವಾಗಿ ಈ ರೀತಿ ಮಾಡುತ್ತವೆ ಎಂದು ತಿಳಿಸಿದ್ದಾರೆ.