ಜಲಾಲಬಾದ್, ಆ. 03 (DaijiworldNews/MB) : ಅಫ್ಘಾನಿಸ್ತಾನದ ಜಲಾಲಬಾದ್ ನಗರದ ಪಶ್ಚಿಮಭಾಗದಲ್ಲಿರುವ ಜೈಲಿನ ಸಮೀಪದಲ್ಲಿ ಸೋಮವಾರ ಮುಂಜಾನೆ ಅಫ್ಗಾನ್ ಭದ್ರತಾ ಪಡೆಗಳು ಮತ್ತು ಐಎಸ್(ಇಸ್ಲಾಮಿಕ್ ಸ್ಟೇಟ್) ಉಗ್ರರು ನಡುವೆ ಸಂಘರ್ಷ ನಡೆದಿದ್ದು ಈ ಸಂದರ್ಭದಲ್ಲಿ ಜೈಲಿನಲ್ಲಿದ್ದ 75 ಕೈದಿಗಳು ಸಾಮೂಹಿಕವಾಗಿ ಪರಾರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಭಾನುವಾರ ರಾತ್ರಿಯಿಂದಲ್ಲೇ ಉಗ್ರರ ದಾಳಿ ಆರಂಭವಾಗಿದ್ದು ಸಂಘರ್ಷದಲ್ಲಿ ಐವರು ನಾಗರಿಕರು ಸಾವನ್ನಪ್ಪಿದರೆ 40 ಮಂದಿ ಗಾಯಗೊಂಡಿದ್ದಾರೆ. ಈ ನಡುವೆ ಈ ಸಂಘರ್ಷವನ್ನೇ ಲಾಭವನ್ನಾಗಿಸಿದ ಕೈದಿಗಳು ಜೈಲಿನಿಂದ ಸಾಮೂಹಿಕವಾಗಿ ಪರಾರಿಯಾಗಿದ್ದಾರೆ. ಇನ್ನು ಪೊಲೀಸರು ಹಾಗೂ ಭದ್ರತಾಪಡೆಯ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದಲ್ಲೇ ಜೈಲಿನ ಸಮೀಪದಲ್ಲೇ ಉಗ್ರರು ದಾಳಿ ನಡೆಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಮೊದಲು ಉಗ್ರರು ಜೈಲಿನ ಪ್ರವೇಶ ದ್ವಾರದಲ್ಲಿ ಕಾರ್ಬಾಂಬ್ ಸ್ಪೋಟಿಸಿದ್ದು ಬಳಿಕ ಸುತ್ತಮುತ್ತಲೂ ಬಾಂಬ್ ಸ್ಫೋಟಿಸಿದ್ದಾರೆ. ಹಾಗೆಯೇ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ನಂಗರ್ಹಾರ್ ಪ್ರಾಂತ್ಯದ ಅಧಿಕಾರಿಗಳು ತಿಳಿಸಿದ್ದಾರೆ.