ದುಬೈ, ಆ 03 (DaijiworldNews/PY): ಭಾರತೀಯ ಮೂಲದ 24 ವರ್ಷದ ಇಂಜಿನಿಯರ್ ಯುವಕನೋರ್ವ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಶಾರ್ಜಾದಲ್ಲಿ ನಡೆದಿದೆ.
ಮೃತ ಯುವಕನನ್ನು ಕೇರಳ ಮೂಲದ ಸುಮೇಶ್ ಎನ್ನಲಾಗಿದೆ.
ಸುಮೇಶ್ ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದು, ಶಾರ್ಜಾದ ಆಲ್ ಧಾಯ್ಡ್ನ ಬಹು ಮಹಡಿ ಕಟ್ಟಡದಲ್ಲಿ ವಾಸವಾಗಿದ್ದರು ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ವರ್ಷದ ಹಿಂದೆಯಷ್ಟೇ ಸುಮೇಶ್ ದುಬೈಗೆ ಆಗಮಿಸಿದ್ದು, ಶಾರ್ಜಾದಲ್ಲಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಸುಮೇಶ್ ಅವರು ಆರನೇ ಮಹಡಿಯಲ್ಲಿ ನಿಂತು ಮೊಬೈಲ್ನಲ್ಲಿ ಮಾತನಾಡುತ್ತಿರುವ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಲ್ಲದೇ, ಈ ಘಟನೆ ನಡೆಯುವ ಮುನ್ನ ಸುಮೇಶ್ ಅವರು ತಮ್ಮ ಮೊಬೈಲ್ ಅನ್ನು ಎಸೆದಿದ್ದಾರೆ ಎಂಬುದಾಗಿ ವರದಿ ತಿಳಿಸಿದೆ.
ಸುಮೇಶ್ ರೂಂಮೇಟ್ ದಿಲೀಪ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಂದು ಈದ್ ಅಲ್ ಅಧಾ ಇದ್ದ ಕಾರಣ ನಾವು ಬಿರಿಯಾನಿ ತಯಾರಿಸಿದ್ದೆವು. ಆ ದಿನ ನಾವು ಎಲ್ಲರೂ ಸೇರಿ ತಮಾಷೆ ಮಡಿಕೊಂಡಿದ್ದೆವು. ಸುಮೇಶ್ ಕೂಡಾ ನಮ್ಮ ಜೊತೆಗಿದ್ದ. ಆದರೆ, ಆತನಿಗೆ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ನಾವು ಊಹಿಸಿರಲಿಲ್ಲ ಎಂದಿದ್ದಾರೆ.
ಸುಮೇಶ್ ಯಾವುದೇ ತೊಂದರೆಗೆ ಒಳಗಾಗಿದ್ದಾನೆ ಎಂಬುದಾಗಿ ಕೆಲವೊಂದ ಸಲ ತಿಳಿಯುತ್ತಿತ್ತು. ಈ ವಿಚಾರವಾಗಿ ಆತನನ್ನು ವಿಚಾರಿಸಿದಾಗ ಆತ ಬೇರೆ ಏನೋ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಎಂದು ಸುಮೇಶ್ನ ರೂಂ ಮೇಟ್ ಹೇಳಿರುವುದಾಗಿ ವರದಿ ವಿವರಿಸಿದೆ.