ಇಸ್ಲಾಮಾಬಾದ್, ಆ 05 (DaijiworldNews/PY): ಭಾರತ ಸರ್ಕಾರವು ಜಮ್ಮು-ಕಾಶ್ಮೀರದಿಂದ 370ನೇ ವಿಧಿಯನ್ನು ತೆಗೆದುಹಾಕಿದ ಮೊದಲ ವಾರ್ಷಿಕೋತ್ಸವದ ಮೊದಲ ದಿನದಂದು ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಮಂಗಳವಾರ ದೇಶದ ಹೊಸ ರಾಜಕೀಯ ನಕ್ಷೆಯನ್ನು ಮುದ್ರಿಸಿದೆ.
ಪಾಕಿಸ್ತಾನ ಸರ್ಕಾರದ ನೂತನ ರಾಜಕೀಯ ನಕ್ಷೆಯಲ್ಲಿ ಜಮ್ಮು-ಕಾಶ್ಮೀರ, ಲಡಾಖ್ ಹಾಗೂ ಗುಜರಾತ್ನ ಜುನಾಗಢ ಸೇರಿದೆ.
ಈ ವಿಚಾರವಾಗಿ ಮಾತನಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು, ಪಾಕಿಸ್ತಾನದ ಐತಿಹಾಸಿಕ ದಿನ ಇದಾಗಿದೆ. ಈ ನಕ್ಷೆಗೆ ಕ್ಯಾಬಿನೆಟ್ ಪರವಾಗಿ ಅನುಮೋದನೆ ದೊರೆತ ನಂತರ ಈ ನಕ್ಷೆಯು ಪಾಕಿಸ್ತಾನದ ಅಧಿಕೃತ ನಕ್ಷೆಯಾಗಲಿದೆ. ಅಲ್ಲದೇ, ಈ ನಕ್ಷೆಯನ್ನು ಶಾಲಾ-ಕಾಲೇಜುಗಳಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉಪಯೋಗ ಮಾಡಲಾಗುವುದು ಎಂದು ಹೇಳಿರುವುದಾಗಿ ಪಾಕ್ನ ಪ್ರಮುಖ ಪತ್ರಿಕೆ ಡಾನ್ ಪ್ರಕಟಿಸಿರುವ ವರದಿ ತಿಳಿಸಿದೆ.
ಗಿಲ್ಗಿಟ್-ಬಾಲ್ಟಿಸ್ತಾನ್, ಜಮ್ಮು-ಕಾಶ್ಮೀರ ಸೇರಿದಂತೆ ಸಂಪೂರ್ಣ ಲಡಾಖ್ ಅನ್ನು ಪಾಕಿಸ್ತಾನ ಸರ್ಕಾರವು ತನ್ನ ನಕ್ಷೆಯಲ್ಲಿ ತೋರಿಸಿದೆ. ಇದು ಒಂದು ವಿವಾದಿತ ಪ್ರದೇಶವಾಗಿದ್ದು ಹಾಗೂ ಅಂತಿಮವಾದ ತೀರ್ಮಾನವನ್ನು ಯುಎನ್ ನಿರ್ಧಾರಗಳ ಅಡಿಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದೆ.
ಯುಎನ್ ಸೆಕ್ಯುರಿಟಿಗಳ ತೀರ್ಮಾನದ ಅಡಿಯಲ್ಲಿ ಮಾತ್ರವೇ ಕಾಶ್ಮೀರದ ವಿಚಾರವು ತಿಳಿಯಲಿದೆ. ಕಾಶ್ಮೀರದ ಜನರಿಗೆ ಇದು ಸ್ವ-ನಿರ್ಣಯದ ಹಕ್ಕನ್ನು ಕಲ್ಪಿಸಲಿದೆ. ವಿಶ್ವ ಸಮುದಾಯವು ಈ ಹಕ್ಕುಗಳನ್ನು ಅವರಿಗೆ ಇನ್ನೂ ಕಲ್ಪಿಸಿಲ್ಲ. ಸರ್ಕಾರವು ಈ ಹಿನ್ನೆಲೆ ತನ್ನ ಪ್ರಯತ್ನವನ್ನು ಮುಂದುವರೆಸಲಿದೆ ಎಂದು ಖಾನ್ ತಿಳಿಸಿದ್ದಾರೆ.
ಈ ಹಿಂದೆ ನೇಪಾಳವು ಕೂಡಾ ತನ್ನ ಹೊಸ ರಾಜಕೀಯ ನಕ್ಷೆಯನ್ನು ಬಿಡುಗಡೆ ಮಾಡಿದ್ದು, ಕಾಲಾಪಾನಿ, ಲಿಂಪಿಯಾಧುರಾ ಹಾಗೂ ಧಾರ್ಚುಲಾಗಳನ್ನು ತನ್ನ ಹೊಸ ರಾಜಕೀಯ ನಕ್ಷೆಯಲ್ಲಿ ತೋರಿಸಿತ್ತು.