ಚೀನಾ, ಆ. 06(DaijiworldNews/HR): ಕೊರೊನಾ ವೈರಸ್ನಿಂದ ಚೇತರಿಸಿಕೊಳ್ಳುವ ಮುನ್ನವೇ ಚೀನಾದ ಮೇಲೆ ಮತ್ತೊಂದು ವೈರಸ್ ಪತ್ತೆಯಾಗಿದ್ದು, ೭ ಜನರನ್ನು ಬಲಿ ಪಡೆದುಕೊಂಡು ೬೦ ಜನರಿಗೆ ಈ ಸೋಂಕು ತಗುಲಿದೆ.
ಬುನಿಯಾ ಎಂಬ ಹೆಸರಿನ ಹೊಸ ವೈರಸ್ ಇದಾಗಿದ್ದು ಇಡೀ ಚೀನಾವೆ ಮತ್ತೊಮ್ಮೆ ಭಯ ಪಡುವಂತೆ ಮಾಡಿದೆ.
ಈ ವೈರಸ್ ಕಚ್ಚುವ ಮೂಲಕ ಮನುಷ್ಯನ ದೇಹ ಪ್ರವೇಶಿಸುತ್ತದೆಯಂತೆ. ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ, ಈ ಹಿನ್ನೆಲೆ ಎಚ್ಚರದಿಂದ ಇರುವಂತೆ ಅಲ್ಲಿನ ವೈದ್ಯಕೀಯ ಪರಿಣಿತರು ತಿಳಿಸಿದ್ದಾರೆ.
ಈ ವೈರಸನ್ನು ಸೀವಿಯರ್ ಫೀವರ್ ವಿಥ್ ಥ್ರೋಂಬೊ ಬೊಕ್ಯಾಟೋಪಿನಿಯಾ ಸಿಂಡ್ರೋಮ್ ಬುನಿವೈರಸ್ ಎಂದು ಗುರುತಿಸಲಾಗಿದ್ದು, ಅಧಿಕ ಜ್ವರದ ಸಮಯದಲ್ಲಿ ಪ್ಲೇಟ್ಲೆಟ್ಗಳನ್ನು ಕಡಿಮೆ ಮಾಡುತ್ತದೆ.
ಇನ್ನು ವಾಂಗ್ ಎನ್ನುವ ಜಿಯಾಂಗ್ಸು ಪ್ರಾಂತ್ಯದ 60 ವರ್ಷದ ಮಹಿಳೆಗೆ ಈ ವೈರಸ್ನ ಸೋಂಕು ತಗುಲಿದ್ದು. ಕೆಮ್ಮು ಹಾಗೂ ಜ್ವರದ ಲಕ್ಷಣಗಳು ಆರಂಭದಲ್ಲಿ ಕಂಡುಬಂದಿತ್ತು. ನಂತರ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರಂತೆ. ವೈದ್ಯರು ಹೇಳುವ ಪ್ರಕಾರ ಈ ವೈರಸ್ನ ಸೋಂಕಿನಿಂದಾಗಿ ಮಹಿಳೆಯ ದೇಹದಲ್ಲಿರುವ ಲ್ಯುಕೋಸೈಟ್, ರಕ್ತದ ಪ್ಲೇಟ್ಲೆಟ್ ಕುಸಿತ ಉಂಟಾಗಿತ್ತು. ಚಿಕಿತ್ಸೆ ಬಳಿಕ ಮಹಿಳೆ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಇದು ಹೊಸ ವೈರಸ್ ಅಲ್ಲ 2011ರಲ್ಲೇ ಈ ವೈರಸ್ ಪತ್ತೆ ಆಗಿತ್ತು. ಈ ವೈರಸ್ ಬಗ್ಗೆ ಗಾಬರಿ ಆಗುವ ಅಗತ್ಯವೇನೂ ಇಲ್ಲ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ ಈ ವೈರಸ್ ಕಾಣಿಸಿಕೊಂಡರೆ, ಅಂಥವರು ಸಾವನಪ್ಪುವ ಪ್ರಮಾಣ ಶೇ ೩೦% ಕ್ಕಿಂತಲೂ ಹೆಚ್ಚು ಎಂದು ತಿಳಿಸಿದ್ದಾರೆ.