ಮಾಸ್ಕೋ, ಆ 11 (DaijiworldNews/HR): ಜಗತ್ತಿನ ಮೊಟ್ಟ ಮೊದಲ ಕೊರೊನಾ ಲಸಿಕೆ ರಷ್ಯಾದಿಂದ ನೋಂದಣಿಯಾಗಿದ್ದು, ಈ ಲಸಿಕೆಯನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಗಳಿಗೆ ಪ್ರಯೋಗ ಮಾಡಲಾಗಿದೆ.
ಇನ್ನು ವಿಶ್ವದಲ್ಲೇ ಮೊದಲ ಬಾರಿಗೆ ಕೋವಿಡ್-19 ವಿರುದ್ಧ ಲಸಿಕೆ ನೋಂದಾಯಿಸಲಾಗಿದ್ದು, ಕೊರೋನಾ ವೈರಸ್ ಲಸಿಕೆಯನ್ನು ತನ್ನ ಮಗಳಿಗೆ ನೀಡಲಾಗಿದೆ ಎಂದು ಮಂತ್ರಿಗಳೊಂದಿಗಿನ ವಿಡಿಯೋ ಕಾನ್ಫರೆನ್ಸ್ ಕರೆಯೊಂದರಲ್ಲಿ ಪುಟಿನ್ ತಿಳಿಸಿದರು.
ಈ ಲಸಿಕೆ ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ, ಬಲವಾದ ರೋಗನಿರೋಧಕ ಶಕ್ತಿಯನ್ನು ರೂಪಿಸುತ್ತದೆ ಎಂದು ಪುಟಿನ್ ಹೇಳಿದರು.
ಇನ್ನು ಶೀಘ್ರದಲ್ಲೇ ದೇಶವು ಲಸಿಕೆಯನ್ನು ಸಾಮೂಹಿಕವಾಗಿ ಉತ್ಪಾದಿಸಲು ಪ್ರಾರಂಭ ಮಾಡುತ್ತದೆ ಎಂದು ತಿಳಿಸಿದರು.
ಈ ಲಸಿಕೆಯನ್ನು ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲಾಗಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿ ಭಾಗಿಯಾದ ಎಲ್ಲ 38 ಜನರಲ್ಲಿಯೂ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದನ್ನು ಗಮನಿಸಿರುವುದಾಗಿ ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.
ಜೂನ್ 18ರಿಂದ ಮನುಷ್ಯರ ಮೇಲೆ ಈ ಪ್ರಯೋಗ ಆರಂಭಿಸಲಾಗಿತ್ತು. ಪ್ರಯೋಗಕ್ಕೆ ಒಳಗಾದವರ ಪೈಕಿ ಮೊದಲ ಗುಂಪು ಜುಲೈ 15ರಂದು ಸಂಶೋಧನಾ ಕೇಂದ್ರಗಳಿಂದ ಬಿಡುಗಡೆಯಾಗಿದ್ದು, ಎರಡನೇ ಗುಂಪು ಜುಲೈ 20ರಂದು ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಹೇಳಲಾಗಿದೆ.