ಬೈರೂತ್, ಆ 11 (DaijiworldNews/HR): ಲೆಬನಾನ್ ರಾಜಧಾನಿ ಬೈರೂತ್ ನ ಬಂದರು ಪ್ರದೇಶದಲ್ಲಿ ಆ 4ರಂದು ಸಂಭವಿಸಿದ ಭಾರೀ ಸ್ಫೋಟದಲ್ಲಿ ಅಪಾರ ಸಾವು-ನೋವು ಸಂಭವಿಸಿದ ನಂತರ ದೇಶದಲ್ಲಿ ಸರಕಾರದ ವಿರುದ್ಧ ಸಾರ್ವಜನಿಕರು ಪ್ರತಿಭಟನೆಗಳನ್ನು ನಡೆಸುತ್ತಿರುವ ಬೆನ್ನಲ್ಲೇ ಅಲ್ಲಿನ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆಯನ್ನು ಘೋಷಿಸಿದ್ದಾರೆ.
ಈಗಾಗಲೇ ಹಲವಾರು ಸಚಿವರು ಸರಕಾರಕ್ಕೆ ರಾಜೀನಾಮೆ ನೀಡಿದ್ದರೆ ಸೋಮವಾರದ ಸಚಿವ ಸಂಪುಟ ಸಭೆಯಲ್ಲಿ ಇನ್ನೂ ಹಲವಾರು ಸಚಿವರು ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರಿಂದ ಸರಕಾರದ ಪತನ ಅನಿವಾರ್ಯ ಎಂದು ಮನಗಂಡು ಪ್ರಧಾನಿ ಸರಕಾರದ ರಾಜೀನಾಮೆ ಘೋಷಿಸಿದ್ದಾರೆ
ಇದಕ್ಕೂ ಮುನ್ನ ಅವರ ನಾಲ್ವರು ಮಂತ್ರಿಗಳು ರಾಜೀನಾಮೆ ನೀಡಿದ್ದರು.ಹಾಗಾಗಿ ಸರಕಾರದ ಪತನ ಅನಿವಾರ್ಯ ಎಂದು ಮನಗಂಡು ದೂರದರ್ಶನ ಮೂಲಕ ಸಾರ್ವಜನಿಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಾವು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಪ್ರಧಾನಿ ಹಸನ್ ದಿಯಾಬ್ ಸರಕಾರ ರಾಜೀನಾಮೆ ಘೋಷಿಸುತ್ತಿದ್ದಂತೆಯೇ ಅಲ್ಲಿನ ಜನರು ನಗರದ ರಸ್ತೆಗಳಲ್ಲಿ ತಮ್ಮ ಕಾರುಗಳ ಹಾರ್ನ್ ಬಾರಿಸಿ ಸಂತಸ ವ್ಯಕ್ತ ಪಡಿಸುತ್ತಿದ್ದು, ಇನ್ನು ಕೆಲವರು ಕೆಲವರು ಸಂಭ್ರಮಾಚರಣೆಯ ಭಾಗವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.