ಫ್ಲೋರಿಡಾ, ಆ. 13 (DaijiworldNews/MB) : ತನ್ನ ಪತಿಯ ಆರೈಕೆ ಮಾಡಲು ಸಾಧ್ಯವಾಗಬೇಕು ಎಂಬ ಕಾರಣದಿಂದಾಗಿ ಪತ್ನಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ ಅಪರೂಪದ ಘಟನೆ ಫ್ಲೋರಿಡಾದ ಫೋರ್ಟ್ ಲಾಡರ್ ಡೇಲ್ನಲ್ಲಿ ನಡೆದಿದೆ.
ಫ್ಲೋರಿಡಾದ ಫೋರ್ಟ್ ಲಾಡರ್ ಡೇಲ್ನ ಮೇರಿ ಡೇನಿಯಲ್ ಮತ್ತು ಸ್ಟೀವ್ ದಂಪತಿಯು ವಿವಾಹವಾದ 24 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 114 ದಿನಗಳವರೆಗೆ ದೂರವಾಗಿದ್ದರು. ಪರಸ್ಪರ ಒಬ್ಬರನ್ನೊಬ್ಬರು ನೋಡಲಾಗದೆ ಪರತಪ್ಪಿಸುತ್ತಿದ್ದರು.
ಸುಮಾರು ಏಳು ವರ್ಷಗಳ ಹಿಂದೆ ಸ್ಟೀವ್ಗೆ ಅಲ್ಝೈಮರ್ (ಮರೆವಿನ ಕಾಯಿಲೆ) ಇರುವುದು ಕಂಡು ಬಂದಿತ್ತು. ಈ ಕಾರಣದಿಂದ ಸ್ಟೀವ್ ಫೋರ್ಟ್ ಲಾಡೆರ್ಡೇಲ್ನ ನರ್ಸಿಂಗ್ ಹೋಮ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕೊರೊನಾ ಕಾರಣದಿಂದಾಗಿ ಲಾಕ್ಡೌನ್ ಆಗಿ ಆಸ್ಪತ್ರೆಯೊಳಗಡೆ ಯಾರಿಗೂ ಪ್ರವೇಶವಿರಲಿಲ್ಲ.
ಈ ಲಾಕ್ಡೌನ್ ಕಾರಣದಿಂದಾಗಿ ಈ ದಂಪತಿಗಳು ತಮ್ಮ ವಿವಾಹ ಜೀವನದ 24 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 114 ದಿನಗಳವರೆಗೆ ದೂರವಾಗಿದ್ದರು. ತನ್ನ ಪತಿಯನ್ನು ನೋಡಲು ಸಾಧ್ಯವಾಗಬೇಕೆಂಬ ಉದ್ದೇಶದಿಂದ ಮೇರಿ ಒಂದು ಉಪಾಯ ಮಾಡಿದ್ದು ಅದೇ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದಾರೆ. ನನ್ನ ಪತಿಗಾಗಿ ನಾನು ಏನು ಮಾಡಲು ಸಿದ್ದ, ಇಂತಹ ಸ್ಥಿತಿಯಲ್ಲಿ ನಾನು ಅವರೊಂದಿಗೆ ಇರುವುದು ಅತ್ಯಗತ್ಯ ಎನ್ನುತ್ತಾರೆ ಮೇರಿ.