ಅಲಾಸ್ಕಾ, ಆ. 13 (DaijiworldNews/MB) : ಆಂಕಾರೋಜ್ನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಯುಎಸ್ನ ಅಲಾಸ್ಕಾದಲ್ಲಿ ನಡೆದಿದ್ದು ತನ್ನ ಚೊಚ್ಚಳ ಹೆರಿಗೆ ವಿಮಾನದಲ್ಲಿ ನಡೆದ ಕಾರಣಕ್ಕೆ ಮಗುವಿಗೆ 'ಸ್ಕೈ' ಎಂದು ತಾಯಿ ನಾಮಕರಣ ಮಾಡಿದ್ದಾರೆ.
ನಗರಕ್ಕಿಂತ ಹೊರವಲಯದಲ್ಲಿ ವಾಸಿಸುತ್ತಿದ್ದ 35 ವಾರಗಳ ಗರ್ಭಿಣಿಯಾಗಿದ್ದ ಮಹಿಳೆ ಕ್ರಿಸ್ಟಲ್ ಹಿಕ್ಸ್ ಆಗಸ್ಟ್ 5 ರಂದು ಬೆಳಿಗ್ಗೆ 1 ಗಂಟೆ ಸುಮಾರಿಗೆ ಸ್ಕೈ ಐರಾನ್ ಹಿಕ್ಸ್ಗೆ ಪ್ರಯಾಣ ಆರಂಭಿಸಿದ ಒಂದು ಗಂಟೆಯ ಒಳಗಾಗಿ ವಿಮಾನದಲ್ಲೇ ಜನ್ಮ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನನಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಸ್ಪತ್ರೆಗೆಂದು ವಿಮಾನದಲ್ಲಿ ಸಂಚಾರ ಮಾಡಿದ ಸಂದರ್ಭ ಇನ್ನಷ್ಟು ಹೆಚ್ಚಾಯಿತು. ಇದು ನನ್ನ ಚೊಚ್ಚಲ ಹೆರಿಗೆ. ವಿಮಾನದಲ್ಲೇ ಹೆರಿಗೆಯಾದ ಕಾರಣಕ್ಕೆ ನಾನು ನನ್ನ ಗಂಡು ಮಗುವಿಗೆ 'ಸ್ಕೈ' ಎಂದು ನಾಮಕರಣ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಮೊದಲು ನನಗೆ ಭಯ ಉಂಟಾಯಿತು. ವಿಮಾನದಲ್ಲಿ ಎಲ್ಲರೂ ಮಗುವಿನ ಕುರಿತಾಗಿಯೇ ಮಾತನಾಡುತ್ತಿದ್ದರು ಎಂದಿದ್ದಾರೆ.
ಹಿಕ್ಸ್ ಮತ್ತು ಅವರ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಕಾಲಿಕ ಜನನವಾದ ಕಾರಣ ಸ್ಕೈ ಅನ್ನು ನಿಗಾದಲ್ಲಿ ಇರಿಸಲಾಗಿದೆ. ಮುಂದಿನ ವಾರದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಇನ್ನು ಹಿಕ್ಸ್, ಸುಮಾರು 18,000 ಅಡಿ ಎತ್ತರದಲ್ಲಿ ವಿಮಾನದಲ್ಲಿ ಹೆರಿಗೆಯಾದ ಕಾರಣ ಜನನ ಪ್ರಮಾಣಪತ್ರಕ್ಕೆ ಮಾಹಿತಿ ನೀಡುವುದು ಕಷ್ಟ ಎಂದು ಹೇಳುತ್ತಾರೆ.