ಲೊಂಬಾರ್ಡಿ, ಆ. 16 (DaijiworldNews/MB) : ಮುಂಜಾನೆ ಕೋಳಿ ಕೂಗುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವೃದ್ದರ ಮನೆಯಲ್ಲಿ ಮುಂಜಾನೆ ಕೋಳಿ ಕೂಗಿದ ಕಾರಣಕ್ಕಾಗಿಯೇ 166 ಯುರೋ ಅಂದರೆ ಭಾರತದ ಸುಮಾರು 14 ಸಾವಿರ ರೂಪಾಯಿ ದಂಡ ತೆರಬೇಕಾಗಿ ಬಂದಿದೆ.
ಹೌದು, ಇಟಲಿಯ ಲೊಂಬಾರ್ಡಿಯ ಪಟ್ಟಣವಾದ ಕ್ಯಾಸ್ಟಿರಾಗಾ ವಿದಾರ್ಡೊದ ಏಂಜೆಲೊ ಬೊಲೆಟ್ಟಿ ಎಂಬ 83 ವರ್ಷದ ವೃದ್ಧರೊಬ್ಬರು ತಮ್ಮ ಮನೆಯಲ್ಲಿ ಕೋಳಿ ಸಾಕುತ್ತಿದ್ದು ಇದು ಮುಂಜಾನೆ ಸುಮಾರು 4:30ಕ್ಕೂ ಮುನ್ನವೇ ಕೂಗುತ್ತದೆ. ಆದರೆ ಇದು ನೆರೆಹೊರೆಯವರಿಗೆ ದೊಡ್ಡ ತಾಪತ್ರಯವೇ ಆಗಿತ್ತು.
ಈ ಕೋಳಿ ಮುಂಜಾನೆ ಬೇಗನೆ ಕೂಗುವುದರಿಂದಾಗಿ ನಮ್ಮ ನಿದ್ದೆಯೆಲ್ಲಾ ಹಾಳಾಗುತ್ತದೆ ಎಂಬುವುದು ಇಲ್ಲಿನ ನೆರೆಹೊರೆಯ ಮನೆಯವರ ದೂರಾಗಿದೆ. ಆದರೆ ಇದರಿಂದಾಗಿ ವೃದ್ದ ಬೊಲೆಟ್ಟಿ ಅವರು ಏನು ಮಾಡುವಂತೆ ಇರಲಿಲ್ಲ. ಕೋಳಿ ಕೂಗುವುದನ್ನು ನಿಲ್ಲಿಸಲು ಸಾಧ್ಯವೇ?
ಇಲ್ಲಿನ ಕಾನೂನು ಪ್ರಕಾರವಾಗಿ ಸಾಕುಪ್ರಾಣಿಗಳನ್ನು ನೆರೆಮನೆಯಿಂದ ಕನಿಷ್ಠ 10 ಮೀಟರ್ ದೂರದಲ್ಲಿ ಇಡಬೇಕಾಗಿದೆ. ಈ ಕಾನೂನಿನಂತೆ ನೆರೆಮನೆಯವರು ಈ ಕೋಳಿ ಕೂಗುವುದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಹಲವು ದೂರುಗಳು ಬರುತ್ತಲ್ಲೇ ಇದ್ದ ಕಾರಣದಿಂದಾಗಿ ನೇರವಾಗಿ ಪೊಲೀಸರು ಕೋಳಿ ಇದ್ದ ಸ್ಥಳಕ್ಕೆ ಬಂದು ಮುಂಜಾನೆ ಕೂಳಿ ಕೂಗುವುದು ದೃಢಗೊಂಡ ಬಳಿಕ ಏಂಜೆಲೊ ಬೊಲೆಟ್ಟಿ ಅವರಿಗೆ 166 ಯುರೋ ಅಂದರೆ ಭಾರತದ ಸುಮಾರು 14 ಸಾವಿರ ರೂಪಾಯಿಯನ್ನು ದಂಡವಾಗಿ ವಿಧಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಬೊಲೆಟ್ಟಿ ಅವರು, ''ಈ ವಿಚಾರ ನನಗೆ ಆಶ್ಚರ್ಯ ಮೂಡಿಸಿದೆ. ಇಷ್ಟು ದೂರ ಅಂತರ ಕಾಯ್ದುಕೊಳ್ಳಬೇಕು ಎಂದು ಮೊದಲೇ ನನಗೆ ತಿಳಿಸಬೇಕಿತ್ತು'' ಎಂದು ಹೇಳಿದ್ದಾರೆ. ಹಾಗೆಯೇ ದಂಡ ರದ್ದು ಮಾಡಲು ಮನವಿ ಮಾಡುವಂತೆ ತೀರ್ಮಾನಿಸಿದ್ದಾರೆ.
ಇನ್ನು ಈ ದಂಡ ವಿಧಿಸಿರುವುದನ್ನು ಸಮರ್ಥಿಸಿಕೊಂಡಿರುವ ಕ್ಯಾಸ್ಟಿರಾಗಾ ವಿದಾರ್ಡೊದ ಮೇಯರ್ ಎಮ್ಮಾ ಪರ್ಫೆಟ್ಟಿ ಅವರು, ''ಪೊಲೀಸರಿಗೆ ನೆರೆಹೊರೆಯವರಿಂದ ಹಲವು ದೂರುಗಳು ಬಂದಿದ್ದು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಅಷ್ಟೇ ಅಲ್ಲದೇ ಸ್ವತಃ ಪೊಲೀಸರೇ ಬೊಲೆಟ್ಟಿಯವರ ವಿಲ್ಲಾ ಬಳಿ ರಾತ್ರಿ ತಂಗಿದ್ದಾರೆ. ಆ ಕೋಳಿ ಮುಂಜಾನೆ 4:30ಕ್ಕೆ ಕೂಗಲು ಆರಂಭಿಸಿ ಬೆಳಗ್ಗೆ 6:00 ರವರೆಗೆ ಕೂಗುತ್ತಲ್ಲೇ ಇತ್ತು'' ಎಂದು ಹೇಳಿದ್ದಾರೆ.