ನ್ಯೂಯಾರ್ಕ್, ಆ. 18 (DaijiworldNews/MB) : ಡೊನಾಲ್ಡ್ ಟ್ರಂಪ್ ನಮ್ಮ ದೇಶದ ಅಸಮರ್ಥ ಅಧ್ಯಕ್ಷ, ಈ ಬಾರಿ ವ್ಯವಸ್ಥೆ ಬದಲಾಯಿಸಬೇಕಾಗಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪತ್ನಿ ಮಿಶೆಲ್ ಒಬಾಮ ಅವರು ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರದಿಂದ ಇಲ್ಲಿನ ವಿಸ್ಕಾನ್ಸಿನ್ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಾರಂಭವಾದ ನಾಲ್ಕು ದಿನಗಳ ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್ನಲ್ಲಿ ಮಾತನಾಡಿದ ಅವರು, ಡೊನಾಲ್ಡ್ ಟ್ರಂಪ್ ಅಸಮರ್ಥ ನಾಯಕ. ಇದು ಅವರು ಮಾಡುವ ಕಾರ್ಯಗಳಿಂದಲ್ಲೇ ಅವರು ತೋರಿಸಿದ್ದಾರೆ. ನಾನು ಟ್ರಂಪ್ ನಮ್ಮ ದೇಶದ ಅಸಮರ್ಥ ಅಧ್ಯಕ್ಷ ಎಂದು ಪ್ರಾಮಾಣಿಕವಾಗಿ ಹೇಳಬಲ್ಲೆ ಎಂದು ಹೇಳಿದ್ದಾರೆ.
ಟ್ರಂಪ್ ಈ ದೇಶದ ನಾಗರಿಕರ ಬೇಡಿಕೆಯನ್ನು ಪೂರೈಸುವಲ್ಲಿ ಅಸಫಲರಾಗಿದ್ದಾರೆ. ಈಗಲೂ ನಾವು ಈ ದೇಶದ ಪರಿಸ್ಥಿತಿಯನ್ನು ಬದಲಿಸಲು ಸಾಧ್ಯವಾಗದಿದ್ದರೆ ಈ ದೇಶ ಸ್ಥಿತಿ ಮತ್ತಷ್ಟು ಅಧಃಪತನಕ್ಕೆ ತಲುಪುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಪ್ರಸ್ತುತ ನಾವು ಕಪ್ಪು, ಬಿಳಿ ವರ್ಣೀಯರೆಂದು ವಿಭಜನೆ ಮಾಡಿರುವ ದೇಶದಲ್ಲಿ ವಾಸಿಸುತ್ತಿದ್ದೇವೆ. ನಾನು ಇಲ್ಲಿ ಕಪ್ಪು ಮಹಿಳೆಯಾಗಿ ಮಾತನಾಡುತ್ತಿದ್ದೇನೆ. ನನ್ನ ಮಾತನ್ನು ಹಲವರು ಕೇಳದಿರುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.
ದೇಶದ ಪರಿಸ್ಥಿತಿ ಸುಧಾರಣೆಗಾಗಿ ಈ ಚುನಾವಣೆಯಲ್ಲಿ ಜೊಬೈಡೆನ್ ಅವರನ್ನು ಬೆಂಬಲಿಸಬೇಕಿದೆ ಎಂದು ಹೇಳಿದ್ದಾರೆ.