ಮಾಲಿ, ಆ. 19 (DaijiworldNews/MB) : ಮಾಲಿಯ ಆಡಳಿತಾರೂಢ ಸರ್ಕಾರದ ವಿರುದ್ಧ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಲ್ಲೇ ಇದ್ದು ಬಂಡುಕೋರ ಸೈನಿಕರ ಪಡೆ ಧಂಗೆ ಎದ್ದಿದ್ದು ಈಗ ಮಾಲಿ ಅಧ್ಯಕ್ಷ ಇಬ್ರಾಹಿಂ ಬೌಬಾಕರ್ ಕಿಟಾ ಅವರು ರಾಜೀನಾಮೆ ನೀಡಿ ಸಂಸತ್ ವಿಸರ್ಜನೆ ಮಾಡಿದ್ದಾರೆ.
ಮಾಲಿಯಲ್ಲಿ ಸರ್ಕಾರದ ವಿರುದ್ಧ ಜನರು ಜುಲೈ ತಿಂಗಳಿನಿಂದ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ರಾಜಧಾನಿ ಬಮಾಕೊನಲ್ಲಿ ಹಲವು ಬಾರಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಅಧ್ಯಕ್ಷ ಬೌಬಾಕರ್ ಕಿಟಾ ಅವರು ಆಡಳಿತ ಸುಧಾರಣೆ ಬಗ್ಗೆ ಭರವಸೆ ನೀಡಿದರು ಕೂಡಾ ಪ್ರತಿಭಟನೆಗಳು ನಿಂತಿರಲಿಲ್ಲ.
ಮಂಗಳವಾರ ಬಂಡುಕೋರ ಸೈನಿಕರ ಪಡೆ ದಿಢೀರ್ ಕಾರ್ಯಾಚರಣೆಯಲ್ಲಿ ಅಧ್ಯಕ್ಷ ಕೇಟಾ ಮತ್ತು ಪ್ರಧಾನಿ ಬೌಬೌ ಸಿಸ್ಸೆ ಅವರನ್ನು ಬಂಧಿಸಿ ಕಾಟಿ ಪಟ್ಟಣದ ಮಿಲಿಟರಿ ನೆಲೆಯಲ್ಲಿ ಇರಿಸಿದ್ದರು. ಇದಾದ ಕೆಲ ಗಂಟೆಗಳ ಬಳಿಕ ಅಧ್ಯಕ್ಷ ಕೇಟಾ ಅವರು ರಾಜೀನಾಮೆ ನೀಡಿದ್ದಾರೆ.
ವಿರೋಧ ಪಕ್ಷ ಅಸಮರ್ಪಕ ಆಡಳಿತ, ಭದ್ರತಾ ವ್ಯವಸ್ಥೆಯಲ್ಲಿನ ಲೋಪ, ಭ್ರಷ್ಟಾಚಾರ, ಸಾಮಾಜಿಕ ನ್ಯಾಯದ ಪಾಲನೆ ಮುಂತಾದ ವಿಚಾರಗಳಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನೆ ಆರಂಭಿಸಿದ್ದು ಜನರು ಕೂಡಾ ಈ ಪ್ರತಿಭಟನೆಗೆ ಕೈ ಜೋಡಿಸಿದ್ದರು.
ಪ್ರತಿಭಟನಕಾರರು ಅಧ್ಯಕ್ಷ ಇಬ್ರಾಹಿಂ ಬೌಬಾಕರ್ ರಾಜೀನಾಮೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದು ಈಗ ಇಬ್ರಾಹಿಂ ಬೌಬಾಕರ್ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ಇಬ್ರಾಹಿಂ ಬೌಬಾಕರ್, ನನಗೆ ಬೇರೆ ದಾರಿಯಿಲ್ಲ, ನನಗೆ ಯಾವುದೇ ಆಯ್ಕೆಗಳಿಲ್ಲದ ಕಾರಣ ರಾಜೀನಾಮೆ ನೀಡಿದ್ದೇನೆ. ಯಾಕೆಂದರೆ ನನಗೆ ರಕ್ತಪಾತವಾಗೋದು ಬೇಕಾಗಿಲ್ಲ ಎಂದು ತಿಳಿಸಿದ್ದಾರೆ.