ವಾಷಿಂಗ್ಟನ್, ಆ. 19 (DaijiworldNews/MB) : ಅಮೇರಿಕಾದ ಅಧ್ಯಕ್ಷೀಯ ಚುನಾವಣಾ ಪ್ರಚಾರ ನಡೆಯುತ್ತಿದ್ದು ಹಾಲಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್ ಈಗ ಹಿಂದೂ ಸಮುದಾಯವನ್ನು ಓಲೈಕೆಗೆ ಮುಂದಾಗಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಇಳಿದಿರುವ ಟ್ರಂಪ್ ಅವರು, ''ನೀವು ನಮ್ಮ ಪಕ್ಷಕ್ಕೆ ಮತ್ತೆ ಮತ ಹಾಕಿ ಗೆಲ್ಲಿಸಿದರೆ, ಅಮೇರಿಕಾದಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆಗೆ ಆದ್ಯತೆ ನೀಡುತ್ತೇವೆ. ಅಮೇರಿಕಾದಲ್ಲಿ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ಯ್ರಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುತ್ತೇವೆ'' ಎಂದು ಭರವಸೆ ನೀಡಿದ್ದಾರೆ.
ಇನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್ ಅವರು ಕೂಡಾ ಚುನಾವಣಾ ಪ್ರಚಾರದಲ್ಲಿ ಅಮೇರಿಕಾದ ಒಟ್ಟು ಜನಸಂಖ್ಯೆಯಲ್ಲಿ ಶೇ 1ರಷ್ಟಿರುವ ಹಿಂದೂ ಸಮುದಾಯದವರ ಓಲೈಕೆಗೆ ಮುಂದಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಅಮೇರಿಕಾದಲ್ಲಿರುವ ಹಿಂದೂ ಸಮುದಾಯದ ಪ್ರಮುಖ ನಾಯಕಿ ನೀಲಿಮಾ ಗೋಣುಗುಂಟ್ಲಾ ಅವರು ಭಾಗವಹಿಸಿದ್ದರು.