ಸಿಯೋಲ್, ಆ 20 (DaijiworldNews/PY): ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತ ಒಂದು ವಿಚಿತ್ರವಾದ ಆಜ್ಞೆಯೊಂದನ್ನು ಹೊರಡಿಸಿದ್ದಾರೆ.
ಕಿಮ್ ಜಾಂಗ್ ಉನ್ ಹೊರಡಿಸಿದ ಆದೇಶವನ್ನು ಕೇಳಿದರೆ ಶ್ವಾನ ಪ್ರಿಯರಂತು ಬೆಚ್ಚಿ ಬೀಳೋದು ಗ್ಯಾರಂಟಿ. ಅದೇನೆಂದರೆ, ಉತ್ತರ ಕೊರಿಯಾದಲ್ಲಿ ಶ್ವಾನಗಳನ್ನು ಸಾಕುತ್ತಿರುವ ಪ್ರತೀ ಮನೆತನವೂ ತಮ್ಮ ಪ್ರೀತಿಯ ಶ್ವಾನವನ್ನು ಸರ್ಕಾರಕ್ಕೆ ನೀಡಬೇಕು ಎಂದು ಆದೇಶ ನೀಡಿದ್ದಾರೆ.
ಉತ್ತರ ಕೊರಿಯಾದಲ್ಲಿ ಮಾಂಸಾಹಾರ ಪೂರೈಕೆಯ ಬಿಕ್ಕಟ್ಟು ಎದುರಾಗಿದ್ದು ಈ ಕಾರಣಕ್ಕಾಗಿ ಕಿಮ್ ಜಾಂಗ್ ಇಂತಹ ಆದೇಶ ಹೊರಡಿಸಿದ್ದಾರೆ.
ಈ ಸರ್ವಾಧಿಕಾರಿಯ ಆದೇಶದಂತೆ, ಅಧಿಕಾರಿಗಳು ಪ್ರತಿಯೊಂದು ಮನೆಗೆ ತೆರಳಿ ಶ್ವಾನ ಇರುವುದನ್ನು ತಿಳಿದುಕೊಂಡು ಶ್ವಾನವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಆದೇಶದಿಂದ ಕೆಲವು ಮಂದಿಗೆ ಗೊಂದಲವುಂಟಾದರೂ ಕೂಡಾ ಈ ಬಗ್ಗೆ ಕಿಮ್ನ ಎದುರು ಮಾತನಾಡುವಂತ ಧೈರ್ಯವಾಗಿ ಯಾರಿಗೂ ಇಲ್ಲ.
ಜಗತ್ತಿನಾದ್ಯಂತ ಕೊರೊನಾ ವೈರಸ್ನಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ. ಇದರ ನಡುವೆ ವರುಣ ಆರ್ಭಟಕ್ಕೆ ಕೂಡಾ ಜನರು ನಲುಗಿ ಹೋಗಿದ್ದು, ಬೆಳೆ ಕೂಡಾ ನಾಶವಾಗಿದೆ. ಈ ಕಾರಣದಿಂದ ಜನರು ಆಹಾರಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ಉತ್ತರ ಕೊರಿಯಾದಲ್ಲಿ ಶ್ವಾನಗಳನ್ನು ಸಾಕುವುದು ಶ್ರೀಮಂತರು ಮಾತ್ರ. ಇನ್ನು ಸಾಕು ಪ್ರಾಣಿಗಳೆಂದರೆ ಹಸು, ಹಂದಿ ಹಾಗೂ ಎಮ್ಮೆಗಳು. ಶ್ವಾನಗಳನ್ನು ಸಾಕುವುದು ಪಾಶ್ಚಾತ್ಯ ಬೂಜ್ವಾ ಸಿದ್ದಾಂತದ ಐಷಾರಾಮಿಯ ಸಂಕೇತವಾಗಿದೆ. ಈ ನಿಟ್ಟಿನಲ್ಲಿ ಕಿಮ್ ತನ್ನ ಸರ್ವಾಧಿಕಾರವನ್ನು ತೋರಿಸಲು ಶ್ವಾನಗಳನ್ನು ಮಾಂಸಾಹಾರಕ್ಕೆ ಉಪಯೋಗಿಸಲು ಮುಂದಾಗಿದ್ದಾರೆ.
ಉತ್ತರ ಕೊರಿಯಾದಲ್ಲಿ ಕೊರೊನಾ ಕಾರಣದಿಂದ ಶೇ.90ರಷ್ಟು ಆಹಾರ ಪೂರೈಕೆ ನಿಂತಿದ್ದು, ಶೇ.60ರಷ್ಟು ಮಂದಿ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಈ ಕಾರಣದಿಂದ ಶ್ವಾನಗಳನ್ನು ಮಾಂಸಾಹಾರಕ್ಕಾಗಿ ಪೂರೈಸಲು ಆದೇಶ ಹೊರಡಿಸಿದ್ದಾನೆ.