ಇಸ್ಲಾಮಾಬಾದ್, ಆ. 22 (DaijiworldNews/MB) : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದು ಹಫೀಜ್ ಸಯೀದ್, ಮಸೂದ್ ಅಜರ್ ಸೇರಿದಂತೆ 88 ಉಗ್ರರ ಮೇಲಿನ ನಿರ್ಬಂಧ ಹೆಚ್ಚಳ ಮಾಡಲಾಗಿದೆ.
ಪಾಕಿಸ್ತಾನವು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆಯ (ಎಫ್ಎಟಿಎಫ್) ‘ಬೂದು ಪಟ್ಟಿ’ಯಲ್ಲಿ ಗುರುತಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.
ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಫತ್ಫ್-ಎಫ್ಎಟಿಎಫ್) 2018 ರ ಜೂನ್ನಲ್ಲಿ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಸೇರಿಸಿತ್ತು. 2019 ರ ಅಂತ್ಯದ ವೇಳೆಗೆ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಅಲ್ಲದೇ, 27 ಅಂಶಗಳನ್ನು ಈಡೇರಿಸುವ ಸಲುವಾಗಿ 2019ರ ಅಕ್ಟೋಬರ್ ವರೆಗೆ ಗಡುವು ನೀಡಿತ್ತು. ಆದರೆ, ಈ ಪೈಕಿ 25 ಅಂಶಗಳನ್ನು ಈಡೇರಿಸುವಲ್ಲಿಯೇ ಪಾಕಿಸ್ತಾನ ವಿಫಲವಾಗಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಈ ಗಡುವನ್ನು ಬಳಿಕ ಫತ್ಫ್ ವಿಸ್ತರಣೆ ಮಾಡಿತ್ತು.
ಇನ್ನು ಪಾಕ್ ಸರ್ಕಾರ ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ಇತರ ಉಗ್ರ ನಾಯಕರ ಎಲ್ಲ ಆಸ್ತಿ, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಿದ್ದು ಈ ಆದೇಶದ ಪ್ರತಿಯಲ್ಲಿ ದಾವೂದ್ನ ಕರಾಚಿ ವಿಳಾಸವೂ ಉಲ್ಲೇಖವಾಗಿದೆ. ಈ ಮೂಲಕ ಪಾಕ್ ಅಧಿಕೃತವಾಗಿ ದಾವೂದ್ ಕರಾಚಿಯಲ್ಲಿ ಇರುವುದನ್ನು ಒಪ್ಪಿಕೊಂಡತ್ತಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.