ಲಂಡನ್, ಆ. 23 (DaijiworldNews/SB) :ಮಹಾತ್ಮ ಗಾಂಧೀಜಿಯವರು ಉಪಯೋಗಿಸುತ್ತಿದ್ದ ಚಿನ್ನದ ಲೇಪದ ಬಣ್ಣವಿದ್ದ ವರ್ತುಲಾಕೃತಿಯ ಕನ್ನಡಕ ಬ್ರಿಟನ್ನಲ್ಲಿ ಸರಿಸುಮಾರು 2.5 ಕೋಟಿ ರೂಪಾಯಿಗಳಿಗೆ (2,60,000 ಪೌಂಡ್) ಹರಾಜಾಗಿದೆ. ಶುಕ್ರವಾರ ಈಸ್ಟ್ ಬ್ರಿಸ್ಟೋಲ್ ಎಂಬ ಸಂಸ್ಥೆಯು ಗಾಂಧೀಜಿಯವರ ಕನ್ನಡಕದ ಹರಾಜು ಕಾರ್ಯಕ್ರಮನ್ನು ಏರ್ಪಡಿಸಿತ್ತು.
''ಹರಾಜಿನ ಮೂಲಕ ನಾವು ಕೇವಲ ಹದಿನಾಲ್ಕು ಲಕ್ಷ ರೂಪಾಯಿಗಳು ದೊರಕಬಹುದೆಂದು ಊಹಿಸಿದ್ದೆವು. ಆದರೆ ಇದೀಗ ಕನ್ನಡಕ ದೊಡ್ಡ ಮೊತ್ತಕ್ಕೆ ಹರಾಜಾಗಿದ್ದು ನಮಗೆ ವಿಶೇಷ ಸಂತೋಷವನ್ನು ನೀಡಿದೆ'' ಎಂದು ಕಂಪೆನಿ ಅಧಿಕೃತರು ಹರಾಜಿನ ನಂತರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಈಸ್ಟ್ ಬ್ರಿಸ್ಟೋಲ್ ಸಂಸ್ಥೆಯ ಹಳೆಯ ಬೀರುವೊಂದರಲ್ಲಿ ಕನ್ನಡಕವೊಂದು ದೊರಕಿತ್ತು. ಕನ್ನಡಕದೊಂದಿಗೆ ದೊರಕಿದ್ದ ಚೀಟಿಯೊಂದರಲ್ಲಿ ''ಇದು ಗಾಂಧೀಜಿಯ ಕನ್ನಡಕ. ನನ್ನ ಮಾವನಿಂದಾಗಿ ಇದು ನನಗೆ ದೊರಕಿತ್ತು'' ಎಂದು ನಮೂದಿಸಲಾಗಿತ್ತು. ಕನ್ನಡಕದ ಕಾಲಘಟ್ಟ ಹಾಗೂ ಮೌಲ್ಯವನ್ನು ಪರಿಶೀಲಿಸಿದ ಹರಾಜು ಸಂಸ್ಥೆ ಕನ್ನಡಕದ ವಾರಿಸುದಾರನನ್ನು ಸಂಪರ್ಕಿಸುವ ಪ್ರಯತ್ನ ಮಾಡಿತ್ತು. 1920-30 ಕಾಲಘಟ್ಟದಲ್ಲಿ ನನ್ನ ಮಾವ ದಕ್ಷಿಣ ಆಫ್ರಿಕಾದಲ್ಲಿರುವ ಬ್ರಿಟಿಷ್ ಪೆಟ್ರೋಲಿಯಂ ನಲ್ಲಿ ಉಧ್ಯೋಗದಲ್ಲಿದ್ದರು. ಅಂದು ಗಾಂಧೀಜಿಯವರು ತಮ್ಮ ಕನ್ನಡಕವನ್ನು ಅವರಿಗೆ ಸ್ಮರಣಿಕೆಯಾಗಿ ನೀಡಿದ್ದರು. ತಲೆಮಾರುಗಳ ಹಸ್ತಾಂತರದಿಂದಾಗಿ ಅದು ನನಗೆ ಲಭಿಸಿತ್ತು ಎಂದು ವಾರಿಸುದಾರ ಹರಾಜು ಸಂಸ್ಥೆಗೆ ತಿಳಿಸಿದ್ದರು. ನಂತರ ಕನ್ನಡಕವನ್ನು ಹರಾಜು ಮಾಡಲು ನಿರ್ಧರಿಸಲಾಗಿತ್ತು.