ಮಾಸ್ಕೊ ಆ. 24 (DaijiworldNews/MB) : ಆಸ್ಪತ್ರೆಯಲ್ಲಿ ಕೋಮಾದಲ್ಲಿರುವ ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನೆ ಅವರ ಕೂದಲು ಹಾಗೂ ಕೈಗಳಲ್ಲಿ ಕೈಗಾರಿಕೆಗಳಲ್ಲಿ ಬಳಸುವ ರಾಸಾಯನಿಕ ವಸ್ತುಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ವೈದ್ಯ ಅಲೆಕ್ಸಾಂಡರ್ ಮುರಾವ್ಸ್ಕೊವ್ಕಿ ಅವರು ಶುಕ್ರವಾರ ಬೆಳಗ್ಗೆ 44 ವರ್ಷದ ಅಲೆಕ್ಸಿ ಅವರ ವಸ್ತ್ರ ಹಾಗೂ ಬೆರಳುಗಳಲ್ಲಿ ಕೈಗಾರಿಕಾ ರಾಸಾಯನಿಕ ಪದಾರ್ಥಗಳು ಪತ್ತೆಯಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದು ಈ ಬಳಿಕ ಆರೋಗ್ಯ ಸಚಿವಾಲಯ ಕೂಡಾ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದು ಅಲೆಕ್ಸಿ ಪತ್ನಿ ಯೂಲಿಯಾ ನವಾಲ್ನೆ ಅವರು ಪೊಲೀಸ್ ಪ್ರಯೋಗಾಲಯದ ವರದಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಿದ್ದಾರೆ ಎಂದು ತಿಳಿಸಿದೆ.
ಸೈಬೀರಿಯಾ ಟೋಮ್ಸ್ಕ್ ನಿಂದ ಮಾಸ್ಕೋಗೆ ವಿಮಾನದಲ್ಲಿ ತೆರಳುತ್ತಿದ್ದ ಸಂಧರ್ಭದಲ್ಲಿ ಏಕಾಏಕಿ ನವಾಲ್ನೆ ಅಸ್ವಸ್ಥಗೊಂಡರ ಬಳಿಕ ವಿಮಾನವನ್ನು ತುರ್ತಾಗಿ ಇಳಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ರಷ್ಯಾ ಅಧ್ಯಕ್ಷ ವ್ಲಾದಿಕರ್ ಪುಟಿನ್ ರ ಪ್ರಭಲ ಟೀಕಾಕಾರರಾಗಿರುವುದರಿಂದ ಚಹಾದ ಮೂಲಕ ವಿಷ ನೀಡಿರುವ ಸಾಧ್ಯತೆ ಇದೆ ಎಂದು ವಕ್ತಾರೆ ಕಿರಾ ಯರ್ಮೈಶ್ ತಿಳಿಸಿದ್ದರು.