ಟೋಕಿಯೋ, ಆ 28(DaijiworldNews/HR): ಜಪಾನ್ ಪ್ರಧಾನ ಮಂತ್ರಿ ಶಿಂಜೊ ಅಬೆ ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಇದ್ದ ಕಾರಣ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ.
ಜಪಾನ್ನ ಅತ್ಯಂತ ಹೆಚ್ಚು ಅವಧಿಯ ಪ್ರಧಾನ ಮಂತ್ರಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಶಿಂಜೊ ಅಬೆ, ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಅಲ್ಸರೇಟಿವ್ ಕೊಲೈಟಿಸ್ನಿಂದ ಬಳಲುತ್ತಿದ್ದಾರೆ. ಕರುಳಿನ ಉರಿಯೂತದ ಕಾಯಿಲೆಗೆ ಚಿಕಿತ್ಸೆ ಪಡೆಯಲು 65 ವರ್ಷದ ಅವರು 2007 ರಲ್ಲಿ ತಮ್ಮ ಮೊದಲ ಅವಧಿಯಲ್ಲಿ ಅಧಿಕಾರ ತೊರೆದಿದ್ದರು.
ಇನ್ನು ಈ ಬಗ್ಗೆ ಮಾತನಾಡಿದ ಜಪಾನ್ನ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಹಿದೆ ಸುಗಾ, ಶಿಂಜೊ ಅಬೆ ರಾಜೀನಾಮೆ ನೀಡುತ್ತಾರೆ ಎಂದು ನಂಬುತ್ತಿರಲಿಲ್ಲ ಆದರೆ ಕಳೆದ ಹದಿನೈದು ದಿನಗಳಿಂದ ಎರಡು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದ ಅಬೆ ತಮ್ಮ ಅಧಿಕಾರದ ಪೂರ್ಣಾವಧಿ ನೋಡಲು ಸಾಧ್ಯವಾಗುವುದಿಲ್ಲ ಎಂಬ ಆತಂಕವನ್ನು ಹೆಚ್ಚಿಸಿದೆ ಎಂದಿದ್ದರು. ಇನ್ನು ಅಬೆ ಅವರ ಆಡಳಿತಾವಧಿ 2021 ಸೆಪ್ಟೆಂಬರ್ ಗೆ ಕೊನೆಯಾಗಲಿದೆ.
ಶಿಂಜೊ ಅಬೆ ಅವರ 2ನೇ ಅವಧಿಯ ಎಂಟು ವರ್ಷಗಳಲ್ಲಿ ಉದಾರವಾದಿ ಹಣಕಾಸಿನ ನೀತಿ, ಬಡ್ಡಿದರಗಳನ್ನು ಕಡಿತಗೊಳಿಸುವುದು ಮತ್ತು ಸರ್ಕಾರಿ ಕ್ಷೇತ್ರಗಳನ್ನು ಉದಾರೀಕರಣಗೊಳಿಸುವುದಕ್ಕೆ ಒತ್ತು ಹಾಗೂ ಜಪಾನ್ನ ಹಳೆಯ ಆರ್ಥಿಕತೆಯನ್ನು ಉತ್ತೇಜಿಸುವ ತ್ರಿ ಆರೋಸ್ ಎಂಬ ವಿಧಾನವನ್ನು "ಅಬೆನೋಮಿಕ್ಸ್" ಎಂದು ಕರೆಯಲಾಗಿತ್ತು.