ವಾಷಿಂಗ್ಟನ್, ಆ 29 (DaijiworldNews/PY): ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷರಾಗಲು ಸಮರ್ಥರಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶುಕ್ರವಾರ ನ್ಯೂ ಹ್ಯಾಂಪ್ಶೇರ್ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷಗಾದಿಗೆ ಅಮೆರಿಕದ ಮಹಿಳೆಯೊಬ್ಬರು ಏರಬೇಕು ಎನ್ನುವ ಮಾತಿಗೆ ನನ್ನ ಬೆಂಬಲವಿದೆ. ಅಧ್ಯಕ್ಷ ಸ್ಥಾನಕ್ಕೆ ಸೂಕ್ತರಾದವರು ನನ್ನ ಮಗಳು ಇವಾಂಕ ಟ್ರಂಪ್. ಆದರೆ, ಕಮಲಾ ಹ್ಯಾರಿಸ್ ಆ ಹುದ್ದೆಗೆ ಸಮರ್ಥರಲ್ಲ ಎಂದು ತಿಳಿಸಿದ್ದಾರೆ.
ಕಮಲಾ ಹ್ಯಾರಿಸ್ ಅವರಿಗೆ, ತಾನು ಅಧ್ಯಕ್ಷೀಯ ಸ್ಥಾನಕ್ಕೆ ಅಭ್ಯರ್ಥಿಯಾದರೆ ಯಾರೂ ಕೂಡಾ ತನಗೆ ಮತ ನೀಡಲಾರರು ಎನ್ನುವ ಕಾರಣದಿಂದ ಅವರು ಅಧ್ಯಕ್ಷೀಯ ಸ್ಥಾನದ ರೇಸ್ನಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ನಾನು ಮೊದಲ ಮಹಿಳಾ ಅಧ್ಯಕ್ಷರನ್ನು ನೀಡಲು ಬಯಸುತ್ತೇನೆ. ಆದರೆ, ಈ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಸೂಕ್ತರಲ್ಲ. ನೀವೆಲ್ಲರೂ ಇವಾಂಕ ಅಧ್ಯಕ್ಷರಾಗಬೇಕು ಎಂದು ಹೇಳುತ್ತಿದ್ದೀರಿ. ನಾನು ಈ ಮಾತನ್ನು ತಳ್ಳಿ ಹಾಕುವುದಿಲ್ಲ ಎಂದು ಹೇಳಿದ್ದಾರೆ.
ಕಮಲಾ ಹ್ಯಾರಿಸ್ ಅವರನ್ನು 2024ರ ಚುನಾವಣೆಯಲ್ಲಿ ಅಧ್ಯಕ್ಷೀಯ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಘೋಷಿಸುವ ಬಗ್ಗೆ ಡೆಮಾಕ್ರಟಿಕ್ ಪಕ್ಷ ಚಿಂತನೆ ನಡೆಸಿಸೆ ಎನ್ನುವ ಮಾತುಗಳು ಕೇಳಿಬಂದಿವೆ. ಈ ಕಾರಣದಿಂದ ಕಮಲಾ ಹ್ಯಾರಿಸ್ ಅವರನ್ನು ಗುರಿಯಾಗಿಸಿಕೊಂಡ ಟ್ರಂಪ್ ಅವರ ವಿರುದ್ದ ಹರಿಹಾಯ್ದಿದ್ದಾರೆ.
ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಮಾಡಬೇಕಾಗಿರುವ ಕಾರ್ಯಗಳನ್ನು ನಿರ್ವಹಿಸಿಲ್ಲ. ಅಲ್ಲದೇ, ಅಮೆರಿಕ ಪ್ರಜೆಗಳ ಸುರಕ್ಷತೆಯ ವಿಚಾರದಲ್ಲೂ ವಿಫಲರಾಗಿದ್ದಾರೆ ಎಂದು ಕಮಲಾ ಹ್ಯಾರಿಸ ಆಕ್ರೋಶ ವ್ಯಕ್ತಪಡಿಸಿದ್ದರು.