ಇಸ್ಲಾಮಾಬಾದ್, ಆ 29 (DaijiworldNews/PY): ಪಾಕಿಸ್ತಾನದಲ್ಲಿ ಸೆ.15ರಿಂದ ಶಾಲಾ-ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತೆ ಆರಂಭವಾಗಲಿವೆ ಎಂದು ಪಾಕ್ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರದೇಶಾದ್ಯಂತ ಹೆಚ್ಚು ಕೊರೊನಾ ವ್ಯಾಪಿಸುತ್ತಿದ್ದ ಹಿನ್ನೆಲೆ ಮಾರ್ಚ್ 16ರಿಂದ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಇದೀಗ ದೇಶದಲ್ಲಿ ಕೊರೊನಾ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ಸರ್ಕಾರ ಈ ನಿರ್ಣಯ ಕೈಗೊಂಡಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಎನ್ಸಿಸಿ ಸಭೆ ನಡೆಸಿದ್ದು, ಸಭೆಯಲ್ಲಿ ಕೊರೊನಾ ಬಿಕ್ಕಟ್ಟಿನ ಬಗ್ಗೆ ಚರ್ಚೆ ಮಾಡಲಾಯಿತು. ಪಾಕ್ ಪ್ರಧಾನಿ ಶಾಲೆಗಳನ್ನು ಪುನರಾರಂಭ ಮಾಡುವ ಬಗ್ಗೆ ಆಸಕ್ತಿ ತೋರಿದ್ದಾರೆ. ಈ ಬಗ್ಗೆ ಸೆ.7ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪ್ರೌಢ ಶಾಲೆ , ಕಾಲೇಜು ಹಾಗೂ ವಿಶ್ವವಿದ್ಯಾಲಯಗಳನ್ನು ಮತ್ತೆ ಆರಂಭ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಆದರೆ, ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳನ್ನು ಸದ್ಯ ಪುನರಾರಂಭ ಮಾಡದೇ ಇರಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ಫ್ರಾನ್ಸ್ನಲ್ಲಿಯೂ ಕೂಡಾ ಶಾಲೆಗಳನ್ನು ಪುನರಾರಂಭ ಮಾಡಲು ಅಲ್ಲಿ ಸರ್ಕಾರ ತೀರ್ಮಾನ ಮಾಡಿದೆ. ಸೆ.1ರ ಮಂಗಳವಾರದಂದು 1.29 ಕೋಟಿ ವಿದ್ಯಾರ್ಥಿಗಳು ತರಗತಿಗೆ ಪುನಃ ಮರಳಲಿದ್ದಾರೆ ಎಂದು ಫ್ರಾನ್ಸ್ ಸರ್ಕಾರ ತಿಳಿಸಿದೆ.
ಈ ಬಗ್ಗೆ ತಿಳಿಸಿರುವ ಫ್ರಾನ್ಸ್ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಕೊರೊನಾ ಹಿನ್ನೆಲೆ ಜಾರಿ ಮಾಡಿದ್ದ ಲಾಕ್ಡೌನ್ ಪರಿಣಾಮ ಆರ್ಥಿಕತೆ ಕುಸಿದಿದೆ. ಈಗ ಅದನ್ನು ಪುನಶ್ಚೇತನಗೊಳಿಸಬೇಕಾಗಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನಾವು ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿಸಿದ್ದು, ಎಲ್ಲರೂ ಮಂಗಳವಾರದಿಂದ ಕೆಲಸಕ್ಕೆ ವಾಪಾಸ್ಸಾಗುತ್ತಿದ್ದಾರೆ. ಇದರೊಂದಿಗೆ ನಾದವು ಕೊರೊನಾ ನಿಯಂತ್ರಿಸಲು ಎಲ್ಲಾ ರೀತಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಶನಿವಾರ 319 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಈ ಮೂಲಕ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 6,284ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ 2.95 ಲಕ್ಷ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.