ನ್ಯೂಯಾರ್ಕ್, ಆ. 30(DaijiworldNews/HR): ಬಾಹ್ಯಾಕಾಶ ಸಂಶೋಧನೆ ಹಾಗೂ ವೈಜ್ಞಾನಿಕ ರಂಗದಲ್ಲಿ ಹೆಸರು ಮಾಡಿರುವ ದೈತ್ಯ ಉದ್ಯಮಿ ಎಲಾನ್ ಮಸ್ಕ್ ಇದೀಗ ಮೆದುಳಿನ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕಂಪ್ಯೂಟರ್ ಚಿಪ್ ಜೋಡಿಸಿ ಅವರ ಸಮಸ್ಯೆ ನಿವಾರಿಸುವ ಕನಸು ಹೊತ್ತಿರುವ ಮಸ್ಕ್ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.
ಈ ಹೊಸ ಪ್ರಯೋಗಕ್ಕಾಗಿ 3 ಹಂದಿಗಳಿಗೆ ಬ್ರೈನ್ ಮಶೀನ್ ಇಂಟರ್ಫೇಸ್ ಜೋಡಿಸಿ ಪರೀಕ್ಷಿಸಲಾಗಿದೆ. ಚಿಪ್ ಜೋಡಿಸಿಕೊಂಡ ಹಂದಿಗೆ ಒಬ್ಬ ಮನುಷ್ಯ ಆಹಾರವನ್ನು ನೀಡುತ್ತಾನೆ. ಕೂಡಲೇ ಹಂದಿ ಚಿಪ್ ಅನ್ನು ತಿನ್ನುವ ಪದಾರ್ಥವೆಂದು ಗ್ರಹಿಸಿ, ಆ ಆಹಾರ ತಿನ್ನಲು ಮುಂದಾಗುತ್ತದೆ. ಬೋನ್ನ ಬಾಗಿಲು ತೆರೆದಾಗ, ಹೊರ ಹೋಗಲು ಯತ್ನಿಸುತ್ತದೆ. ಹಂದಿಯ ಮೆದುಳಿನಲ್ಲಿನ ಪ್ರತಿಕ್ರಿಯೆಗಳ ಸಂಕೇತಗಳನ್ನು ಚಿಪ್ ನೇರವಾಗಿ ಕಂಪ್ಯೂಟರ್ಗೆ ರವಾನಿಸಿದೆ.
ಎಲಾನ್ ಮಸ್ಕ್ ಈ ಹಂದಿಯನ್ನು ಜಗತ್ತಿನೆದುರು ಪ್ರದರ್ಶಿಸಿದ್ದು, ಆ ಹಂದಿಗೆ ಗೆಟ್ರುಡ್ ಎಂದು ಹೆಸರಿಸಲಾಗಿದೆ. ಕಂಪ್ಯೂಟರ್ ಚಿಪ್ ಬಗ್ಗೆ ಮಾಹಿತಿ ನೀಡಿದ ಎಲಾನ್ ಮಸ್ಕ್, ಚಿಪ್ ಅಳವಡಿಸಿದ ಹಂದಿಯ ದೃಶ್ಯಗಳನ್ನು ತೋರಿಸಿದ್ದಾರೆ. ಚಿಕ್ಕ ನಾಣ್ಯದ ಗಾತ್ರದ, ಅತಿ ಚಿಕ್ಕ ವೈರ್ಗಳನ್ನು ಹೊಂದಿದ್ದ ಚಿಪ್ಅನ್ನು ಇದಕ್ಕೆ ಎರಡು ತಿಂಗಳ ಕಾಲ ಅಳವಡಿಸಲಾಗಿತ್ತು ಎಂದು ತಿಳಿಸಿದ್ದಾರೆ.
ನ್ಯೂರಾಲಿಂಕ್ ಕಂಪನಿಯನ್ನು 2016ರಲ್ಲಿ ಸ್ಥಾಪಿಸಲಾಗಿದ್ದು, ಮಿದುಳಿಗೂ ಯಂತ್ರಕ್ಕೂ ವೈರ್ಗಳಿಲ್ಲದೇ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈ ಚಿಪ್ ಅಳವಡಿಸಿಕೊಂಡು ಜನರು ತಮ್ಮ ನೆನಪುಗಳನ್ನು ಕಾಪಾಡಿಕೊಳ್ಳುವುದಲ್ಲದೇ, ಮರುಕಳಿಸಿಕೊಳ್ಳಬಹುದು ಎಂದು ಮಸ್ಕ್ ಮಾಹಿತಿ ನೀಡಿದ್ದಾರೆ.