ಇಸ್ಲಾಮಾಬಾದ್, ಸೆ 03 (DaijiworldNews/PY): ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪರ ವಕೀಲರ ನೇಮಕ ಮಾಡಲು ಭಾರತಕ್ಕೆ ಇನ್ನೊಂದು ಅವಕಾಶ ಕಲ್ಪಿಸುವಂತೆ ಗುರುವಾರ ಪಾಕ್ ಸರ್ಕಾರಕ್ಕೆ ಇಸ್ಲಾಮಾಬಾದ್ ಸರ್ಕಾರ ನಿರ್ದೇಶಿಸಿದೆ.
ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ನೀಡಿದ ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸಿರುವ ಮರುಪರಿಶೀಲನೆ ಅರ್ಜಿಯ ವಿಚಾರಣೆ ನಡೆಸಲು ಆರೋಪಿ ಕುಲಭೂಷಣ್ ಜಾಧವ್ ಪರ ವಕೀಲರ ನೇಮಕ ಪ್ರಕರಣವನ್ನು ಇಸ್ಲಾಮಾಬಾದ್ ಹೈಕೋರ್ಟ್ ಕೈಗೆತ್ತಿಕೊಂಡಿದ್ದು, ಭಾರತಕ್ಕೆ ವಕೀಲರ ನೇಮಕ ಮಾಡಲು ಮತ್ತೊಂದು ಅವಕಾಶ ಕಲ್ಪಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ತಿಳಿಸಿದೆ.
ಪಾಕಿಸ್ತಾನವು ಅಂತರಾಷ್ಟ್ರೀಯ ನ್ಯಾಯಾಲಯದ ಆದೇಶಗಳನ್ನು ಪಾಲಿಸಲು ಭಾರತಕ್ಕೆ ಕಾನ್ಸುಲರ್ ಪ್ರವೇಶವನ್ನು ನೀಡಿತ್ತು. ಆದರೆ, ಆತನ ಪರ ವಕೀಲರನ್ನು ನೇಮಿಸುವ ಪಾಕಿಸ್ತಾನದ ಪ್ರಸ್ತಾಪಕ್ಕೆ ಭಾರತ ಉತ್ತರಿಸಿಲ್ಲ ಎಂದು ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಾದಗಳನ್ನು ಆಲಿಸಿದ ಹೈಕೋರ್ಟ್ ನಂತರ, ಜಾಧವ್ ಪರ ವಕೀಲರ ನೇಮಕದ ಬಗ್ಗೆ ನೀಡಿರುವ ಆದೇಶವನ್ನು ಭಾರತಕ್ಕೆ ಕಳುಹಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಆದೇಶಿಸಿತು. ಹಾಗೂ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 3ರವರೆಗೆ ಮುಂದೂಡಿದೆ. ಹೈಕೋರ್ಟ್ ಆದೇಶ ನೀಡಿದಂತೆ ಜಾಧವ್ ಅವರ ಶಿಕ್ಷೆಯನ್ನು ಪರಿಶೀಲಿಸಲು ಪಾಕಿಸ್ತಾನ ವಿಶೇಷ ಕಾನೂನು ಜಾರಿಗೆ ತಂದಿದೆ.