ಕೊಲಂಬೋ, ಸೆ.4(DaijiworldNews/HR): ಭಾರತಕ್ಕೆ ಕುವೈತ್ನಿಂದ ತೈಲ ಹೊತ್ತು ತರುತ್ತಿದ್ದ ನೌಕೆ ಶ್ರೀಲಂಕಾದ ಪೂರ್ವ ಕರಾವಳಿ ಸಮೀಪ ಹೊತ್ತಿ ಉರಿದ ಘಟನೆ ನಡೆದಿದ್ದು, ನೌಕೆಯಲ್ಲಿದ್ದ 23 ಸಿಬ್ಬಂದಿ ಪೈಕಿ ಒಬ್ಬರು ಕಣ್ಮರೆಯಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಈ ಸಂಬಂಧ ಕೇರಳ ತನ್ನ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ಪನಾಮಾ ನೋಂದಣಿಯ ಆಯಿಲ್ ಟ್ಯಾಂಕರ್ 'ನ್ಯೂ ಡೈಮಂಡ್' 2,70,000 ಮೆಟ್ರಿಕ್ ಟನ್ನಷ್ಟು ಕಚ್ಚಾ ತೈಲವನ್ನು ಕುವೈತ್ನಿಂದ ಭಾರತಕ್ಕೆ ಹೊತ್ತು ತರುತ್ತಿತ್ತು. ಪೂರ್ವ ಜಿಲ್ಲೆ ಅಂಪಾರದಲ್ಲಿ ಸಂಘಮಂಕಂದ ಕರಾವಳಿ ಸಮೀಪ ಅದರ ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಸಮುದ್ರದಲ್ಲಿ ತೈಲ ಸೋರಿಕೆಯಾಗಿದ್ದರೆ ತನ್ನ 600 ಕಿ.ಮೀ ಚದರ ಕರಾವಳಿ ಪ್ರದೇಶಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಘಟನೆಯ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಭಾರತ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರಕ್ಕೆ ಕೇರಳ ಸರ್ಕಾರ ಕೋರಿದೆ.