ಜಿನೆವಾ, ಸೆ. 05 (DaijiworldNews/MB) : ಕೊರೊನಾ ವೈರಸ್ ಸೋಂಕಿಗೆ 2021ರ ಮಧ್ಯಭಾಗದವರೆಗೂ ಸಾರ್ವತ್ರಿಕ ಲಸಿಕೆ ದೊರೆಯದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಹಿರಿಯ ವಿಜ್ಞಾನಿ ಮತ್ತು ವಕ್ತಾರರಾದ ಮಾರ್ಗರೆಟ್ ಹ್ಯಾರಿಸ್ ''ಕೊರೊನಾ ಸೋಂಕಿಗೆ 2021ರ ಮಧ್ಯದವರೆಗೂ ಸಾರ್ವತ್ರಿಕೆ ಲಸಿಕೆ ಪತ್ತೆ ಸಾಧ್ಯವಿಲ್ಲ. ಪ್ರಸ್ತುತ ಸಮಯದ ಪರಿಗಣನೆಯಲ್ಲಿ ನೋಡಿದರೆ ಮುಂದಿನ ವರ್ಷದ ಅರ್ಧದವರೆಗೂ ಸಾರ್ವತ್ರಿಕ ಕೊರೊನಾ ಲಸಿಕೆ ದೊರೆಯದು'' ಎಂದು ಹೇಳಿದ್ದು, ''ಈಗಾಗಲೇ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಹಲವು ಸಂಸ್ಥೆಗಳು ನಡೆಸಿದೆ. ಅದರಿಂದಾಗಿ ಕನಿಷ್ಟ ಆರು ಮಂದಿ ಉತ್ತಮ ಪರಿಣಾಮ ಪಡೆದಿದ್ದಾರೆ'' ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹಿರಿಯ ವಿಜ್ಞಾನಿ ಭಾರತ ಮೂಲದ ವೈದ್ಯ ಡಾ.ಸೌಮ್ಯ ಸ್ವಾಮಿನಾಥನ್ ಅವರು ಕೂಡಾ ಮಾತನಾಡಿದ್ದು, ''ಲಸಿಕೆ ಅಭಿವೃದ್ದಿ ಈಗ ನಿರ್ಣಾಯಕ ಹಂತ ತಲುಪಿದೆ. ಹಲವು ಲಸಿಕೆಗಳು ಮೂರನೇ ಹಂತದಲ್ಲಿದೆ. ಆದರೆ ವಾಸ್ತಾವಿಕವಾಗಿ ಈ ಲಸಿಕೆ ಸಾರ್ವಜನಿಕ ಬಳಕೆಗೆ ದೊರೆಯಬೇಕಾದರೆ 2021ರ ಮಧ್ಯಭಾಗದವರೆಗೂ ಸಾಧ್ಯವಾಗದು'' ಎಂದು ತಿಳಿಸಿದ್ದಾರೆ.
''ಈಗಾಗಲೇ ಹಲವು ದೇಶಗಳು ಕೊರೊನಾ ಲಸಿಕೆ ಅಭಿವೃದ್ದಿಯಲ್ಲಿ ತೊಡಗಿ ದೇಶದ ಜನರ ರೋಗ ನಿರೋಧಕ ಶಕ್ತಿ ಅಭಿವೃದ್ದಿ ಕಾರ್ಯದಲ್ಲಿ ತೊಡಗಿದೆ. ಜಾಗತಿಕವಾಗಿ ಮಿಲಿಯನ್ ಡೋಸ್ಗಟ್ಟಲೆ ಲಸಿಕೆಯ ಅಗತ್ಯವಿದೆ. ಇದನ್ನು ತಯಾರಿಸಲು ಬಹಳ ಕಾಲವಕಾಶ ಬೇಕಾಗುತ್ತದೆ. ಹೀಗಿರುವಾಗ ಜನರು ತಮ್ಮ ಜಾಗರೂಕತೆಯಲ್ಲಿದ್ದು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದು ಅತ್ಯಗತ್ಯ'' ಎಂದು ಹೇಳಿದರು.