ಕೊಲಂಬೋ, ಸೆ. 05 (DaijiworldNews/MB) : ಶುಕ್ರವಾರ ಭಾರತಕ್ಕೆ ಕುವೈತ್ನಿಂದ ತೈಲ ಹೊತ್ತು ತರುತ್ತಿದ್ದ ನೌಕೆ ಶ್ರೀಲಂಕಾದ ಪೂರ್ವ ಕರಾವಳಿ ಸಮೀಪ ಹೊತ್ತಿ ಉರಿದಿದ್ದು ಈ ಅಗ್ನಿ ಅವಘಡದಲ್ಲಿ ಅಪಾಯಕ್ಕೆ ಸಿಲುಕಿದ್ದ 22 ಮಂದಿ ಸಿಬ್ಬಂದಿಗಳನ್ನು ಭಾರತೀಯ ನೌಕಾಪಡೆಯ ನೌಕೆ ಎನ್ಎಸ್ಎಸ್ ಸಹ್ಯಾದ್ರಿ ರಕ್ಷಿಸಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ಪನಾಮಾ ನೋಂದಣಿಯ ಆಯಿಲ್ ಟ್ಯಾಂಕರ್ 'ನ್ಯೂ ಡೈಮಂಡ್' 2,70,000 ಮೆಟ್ರಿಕ್ ಟನ್ನಷ್ಟು ಕಚ್ಚಾ ತೈಲವನ್ನು ಕುವೈತ್ನಿಂದ ಭಾರತಕ್ಕೆ ಹೊತ್ತು ತರುತ್ತಿತ್ತು. ಶ್ರೀಲಂಕಾದ ಸಮುದ್ರದ ದಂಡೆಯಲ್ಲಿ ಅದರ ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ದುರ್ಘಟನೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದರು. ಆದರೆ ಇತರೆ 22 ಮಂದಿ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು.
ಈ ವಿಷಯ ತಿಳಿದ ಕೂಡಲೇ ಭಾರತೀಯ ನೌಕಾಪಡೆ ಎನ್ಎನ್ಎಸ್ ಸಹ್ಯಾದ್ರಿಯ ಮೂಲಕ ನೆರವಿಗೆ ಧಾವಿಸಿದ ಭಾರತೀಯ ನೌಕಾಪಡೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು 22 ಮಂದಿ ಸಿಬ್ಬಂದಿಗಳನ್ನು ರಕ್ಷಣೆ ಮಾಡಿದ್ದಾರೆ.
ಇನ್ನು ಈ ಅವಘಡದ ಹಿನ್ನೆಲೆ ಕೇರಳ ತನ್ನ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದ್ದು ಸಮುದ್ರದಲ್ಲಿ ತೈಲ ಸೋರಿಕೆಯಾಗಿದ್ದರೆ ತನ್ನ 600 ಕಿ.ಮೀ ಚದರ ಕರಾವಳಿ ಪ್ರದೇಶಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಘಟನೆಯ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಭಾರತ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರಕ್ಕೆ ಕೇರಳ ಸರ್ಕಾರ ಕೋರಿತ್ತು.