ಹಾಂಗ್ಕಾಂಗ್,ಸೆ.7(DaijiworldNews/HR): ರಾಷ್ಟ್ರೀಯ ಭದ್ರತಾ ಕಾನೂನು ಉಲ್ಲಂಘಿಸಿ ಚೀನಾ ಜಾರಿಗೊಳಿಸಿರುವ ಕಠಿಣ ಕಾನೂನನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಸುಮಾರು 280ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಸಾಂಧರ್ಭಿಕ ಚಿತ್ರ
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಸುಮಾರು 50 ಸಾವಿರ ಜನರನ್ನು ಒಗ್ಗೂಡಿಸುವ ಉದ್ದೇಶದೊಂದಿಗೆ ಅಪರಿಚಿತ ಕಾರ್ಯಕರ್ತರು ಆನ್ಲೈನ್ ಮೂಲಕ ಕರೆ ನೀಡಿದ್ದು, ಅದರಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು 'ಹಾಂಗ್ಕಾಂಗ್ ಅನ್ನು ಮುಕ್ತಗೊಳಿಸಿ' ಎಂಬ ಘೋಷಣೆಗಳನ್ನು ಕೂಗಿ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಅನುಮಾನಾಸ್ಪದವಾಗಿ ಹಾಗೂ ಕಾನೂನುಬಾಹಿರವಾಗಿ ಗುಂಪುಗೂಡಿದ ಆರೋಪದಡಿಯಲ್ಲಿ 270 ಜನರನ್ನು, ದುರ್ವರ್ತನೆ ತೋರಿದ ಕಾರಣ ಐವರನ್ನು, ಗುರುತಿನ ಚೀಟಿ ತೋರಿಸದ ಐವರನ್ನು ವಶಕ್ಕೆ ಪಡೆಯಲಾಗಿದೆ. ಹಾಂಗ್ಕಾಂಗ್ ಸ್ವಾತಂತ್ರ್ಯದ ಪರವಾಗಿ ಘೋಷಣೆಗಳನ್ನು ಕೂಗುವ ಮೂಲಕ ಭದ್ರತಾ ಕಾನೂನು ಉಲ್ಲಂಘಿಸಿದ ಓರ್ವ ಮಹಿಳೆಯನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಂಗ್ಕಾಂಗ್ನಲ್ಲಿ ಚೀನಾ ಜಾರಿಗೊಳಿಸಿರುವ ರಾಷ್ಟ್ರೀಯ ಭದ್ರತಾ ಕಾನೂನು ಜುಲೈ 1ರಿಂದ ಜಾರಿಗೆ ಬಂದಿದೆ. ಪ್ರತ್ಯೇಕತಾವಾದ, ವಿಧ್ವಂಸಕ ಕೃತ್ಯಗಳು, ಭಯೋತ್ಪಾದನೆ ಮತ್ತು ವಿದೇಶಿ ಪಡೆಗಳೊಂದಿಗಿನ ಒಡನಾಟದಂತಹ ಗಂಭೀರ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲು ಈ ಕಾನೂನು ಅವಕಾಶ ಕಲ್ಪಿಸುತ್ತದೆ.