ವಾಷಿಂಗ್ಟನ್, ಸೆ. 8(DaijiworldNews/HR): ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ತಯಾರಾಗುತ್ತಿರುವ ಲಸಿಕೆಯ ಪರಿಣಾಮಕಾರಿ ಗುಣ ಮತ್ತು ವಿಶ್ವಾಸಾರ್ಹತೆ ಕುರಿತು ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಖಂಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಂಥವರೆಂದೂ ಅಧ್ಯಕ್ಷರಾಗಲು ಸಾಧ್ಯವಿಲ್ಲ' ಎಂದಿದ್ದಾರೆ.
ಈ ಬಗ್ಗೆ ಶ್ವೇತಭವನದಲ್ಲಿ ಲೇಬರ್ ಡೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಲಾ ಹ್ಯಾರಿಸ್, ಕೊರೊನಾ ಲಸಿಕೆ ತಯಾರಿಕೆ ಯತ್ನವನ್ನೇ ಲೇವಡಿ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಲಸಿಕೆ ಕುರಿತು ತಾವು ಆಡಿರುವ ಮಾತುಗಳಿಗೆ ಬೈಡನ್ ಮತ್ತು ಹ್ಯಾರಿಸ್ ಇಬ್ಬರು ತಕ್ಷಣ ಕ್ಷಮೆಯಾಚಿಸಬೇಕು ಎಂದು ಟ್ರಂಪ್ ಒತ್ತಾಯಿಸಿದ್ದಾರೆ.
ಇನ್ನು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರು ಭಾನುವಾರ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೊರೊನಾ ಲಸಿಕೆಯ ಪರಿಣಾಮಕಾರಿ ಗುಣ ಮತ್ತು ವಿಶ್ವಾಸಾರ್ಹತೆಯ ವಿಚಾರದಲ್ಲಿ ಅಧ್ಯಕ್ಷರು ನೀಡುತ್ತಿರುವ ಹೇಳಿಕೆಗಳ ಮೇಲೆ ನಂಬಿಕೆ ಇಲ್ಲ' ಎಂದು ಹೇಳಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಟ್ರಂಪ್, 'ಲಸಿಕೆ ಕುರಿತು ಹೀಗೆಲ್ಲ ಮಾತನಾಡುವವರು, ಅಮೆರಿಕದ ಅಧ್ಯಕ್ಷರಾಗಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.