ವಾಷಿಂಗ್ಟನ್, ಸೆ. 13 (DaijiworldNews/MB) : ಅಮೆರಿಕದ ಪೂರ್ವ ಕರಾವಳಿ ಭಾಗದಲ್ಲಿ ಉಂಟಾಗಿರುವ ಕಾಳ್ಗಿಚ್ಚಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆಯು 30 ಕ್ಕೆ ಏರಿದ್ದು ಹತ್ತಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ಈ ಕಾಳ್ಗಿಚ್ಚಿನಿಂದಾಗಿ ಕ್ಯಾಲಿಫೋರ್ನಿಯಾ, ಒರೆಗಾನ್ ಮತ್ತು ವಾಷಿಂಗ್ಟನ್ ಭಾಗದ ಸುಮಾರು ಹತ್ತು ಸಾವಿರ ಜನರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಕ್ಯಾಲಿಫೋರ್ನಿಯಾದಲ್ಲಿ 19 ಮಂದಿ, ಒರೆಗಾನ್ನಲ್ಲಿ 8 ಮಂದಿ, ವಾಷಿಂಗ್ಟನ್ನಲ್ಲಿ ಒಂದು ವರ್ಷದ ಮಗು ಮೃತಪಟ್ಟಿದೆ ಎಂದು ವರದಿಯಾಗಿದೆ.
ಕ್ಯಾಲಿಫೋರ್ನಿಯಾದಲ್ಲಿ ಸುಮಾರು 28 ಭಾಗಗಳಲ್ಲಿ ಕಾಳ್ಗಿಚ್ಚು ಹಬ್ಬಿದ್ದು ಸುಮಾರು 16,000 ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಚರಿಸುತ್ತಿದ್ದಾರೆ. ಸೋಮವಾರ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಯಾಲಿಫೋರ್ನಿಯಾಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಒರೆಗಾನ್ ತುರ್ತು ಸ್ಥಿತಿ ನಿರ್ವಹಣಾ ನಿರ್ದೇಶಕ ಆ್ಯಂಡ್ರೋ ಫೆಲ್ಫ್ಸ್ ಅವರು, ಸಮಯಕ್ಕೆ ಸರಿಯಾಗಿ ಎಚ್ಚರಿಕೆಯ ಮಾಹಿತಿ ದೊರೆಯದ ಕಾರಣ ಸುರಕ್ಷಿತ ಸ್ಥಳಕ್ಕೆ ತೆರಳಲಾಗದೆ ಹಲವು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋದ ಈಶಾನ್ಯದ ತಪ್ಪಲಿನಲ್ಲಿ ಅಗ್ನಿ ಅವಘಡ ಸಂಭವಿಸಿ, ಕನಿಷ್ಠ 2,000 ಕಟ್ಟಡಗಳು ನಾಶಗೊಂಡಿತ್ತು.