ಇಸ್ಲಾಮಾಬಾದ್,ಸೆ.18 (DaijiworldNews/HR): ಅಕ್ರಮ ಭೂ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ನವಾಜ್ ಷರೀಫ್ ಬಂಧನಕ್ಕೆ ಪಾಕಿಸ್ತಾನ ಸರ್ಕಾರ ವಾರಂಟ್ ಹೊರಡಿಸಿದೆ.
ನವಾಜ್ ಷರೀಫ್(70 ) ಸದ್ಯ ಲಂಡನ್ನಲ್ಲಿ ನೆಲೆಸಿದ್ದು, ವಿದೇಶದಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಷರೀಫ್ ಮಾಡಿಕೊಂಡಿದ್ದ ಮನವಿಯನ್ನು ಲಾಹೋರ್ ಹೈಕೋರ್ಟ್ ಪುರಸ್ಕರಿಸಿತ್ತು. ನಾಲ್ಕು ವಾರಗಳ ಕಾಲ ವಿದೇಶದಲ್ಲಿರಲು ಅನುಮತಿ ಲಭಿಸಿದ್ದರಿಂದ ಕಳೆದ ವರ್ಷದ ನವೆಂಬರ್ನಲ್ಲಿ ಷರೀಫ್, ಲಂಡನ್ಗೆ ಪ್ರಯಾಣ ಬೆಳೆಸಿದ್ದರು.
ನವಾಜ್ ಪುತ್ರಿ ಮರಿಯಂ ಹಾಗೂ ಅಳಿಯ ಮಹಮ್ಮದ್ ಸಫ್ದಾರ್ ಅವರು ಅಕ್ರಮ ಭೂ ಹಂಚಿಕೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ಡಿಸೆಂಬರ್ 2018ರಂದು ಅಲ್ ಅಜಿಜಿಯಾ ಸ್ಟೀಲ್ ಮಿಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಷರೀಫ್ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿಯೂ ಅವರಿಗೆ ಜಾಮೀನು ಲಭಿಸಿತ್ತು.
ಇನ್ನು ಕಾನೂನು ಪ್ರಕಾರವೇ ನವಾಜ್ ಷರೀಫ್ ಅವರನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.