ಯುಎನ್, ಸೆ. 23 (DaijiworldNews/MB) : ಬೇರೆ ದೇಶಗಳೊಂದಿಗೆ ಯುದ್ಧ ನಡೆಸುವ, ಭೂಪ್ರದೇಶ ವಿಸ್ತರಿಸುವ ಉದ್ದೇಶ ಚೀನಾಕ್ಕಿಲ್ಲಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದ 75ನೇ ಸಭೆಯನ್ನುದ್ದೇಶಿಸಿ ಮಂಗಳವಾರ ರೆಕಾರ್ಡ್ ವಿಡಿಯೊ ಸಂದೇಶದಲ್ಲಿ ಮಾತನಾಡಿದ ಅವರು, ಪೂರ್ವ ಲಡಾಕ್ನಲ್ಲಿ ಭಾರತ-ಚೀನಾ ಸೇನೆ ನಿಯೋಜನೆ, ಉದ್ವಿಗ್ನ ಸ್ಥಿತಿ ಬಗ್ಗೆ ಮಾತನಾಡಿ ಸಂಧಾನಗಳ ಮೂಲಕವೇ ಬಗೆಹರಿಸಲು ಚೀನಾ ಉದ್ದೇಶಿಸಿದೆ. ದೇಶಗಳ ನಡುವೆ ಯಾವುದೇ ವಿವಾದವಿದ್ದರೂ ಶಾಂತಿಯಿಂದ ಮಾತುಕತೆ ನಡೆಸಿ ಬಗೆಹರಿಸಲು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.
ವಿಸ್ತರಣೆಯ ಕಾಲ ಮುಗಿಯಿತು, ವಿಸ್ತರಣೆ ಮಾಡಲು ಮುಂದಾದವರು ಇತಿಹಾಸದಲ್ಲಿ ಅಳಿದುಹೋಗಿದ್ದಾರೆ ಎಂದು ಚೀನಾ ವಿರುದ್ದ ವಾಗ್ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಯಾಗಿ ಹೇಳಿಕೆ ನೀಡಿದ ಕ್ಸಿ ಜಿನ್ ಪಿಂಗ್, ನಮ್ಮ ದೇಶ ನಾಲ್ಕು ಗೋಡೆಗಳ ಹಿಂದೆ ನಿಂತು ಏನು ಬೆಳವಣಿಗೆಯಾಗುತ್ತಿದೆ ಎಂದು ನೋಡುವುದಿಲ್ಲ. ಬದಲಾಗಿ ಹೊಸ ಅಭಿವೃದ್ಧಿ ಮಾದರಿಯನ್ನು ಬೆಳೆಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದರಿಂದಾಗಿ ಚೀನಾದ ಆರ್ಥಿಕತೆ ಮಾತ್ರವಲ್ಲದೆ ಜಾಗತಿಕ ಆರ್ಥಿಕ ಚೇತರಿಕೆ, ಬೆಳವಣಿಗೆಯಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಕೊರೊನಾ ಪ್ರಕರಣಗಳ ನೈಜ್ಯ ಅಂಕಿ ಅಂಶಗಳನ್ನು ಚೀನಾ ಮುಚ್ಚಿಡುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಈ ಸಂದರ್ಭದಲ್ಲಿ ಕೊರೊನಾ ವೈರಸ್ನ್ನು ಒಂದಾಗಿ ಎದುರಿಸಬೇಕಿದೆ. ವಿಶ್ವಸಂಸ್ಥೆಯ ಮಾರ್ಗಸೂಚಿಗಳ ಪಾಲನೆ ಮಾಡಬೇಕು. ಕೊರೊನಾ ವಿರುದ್ದ ಜಾಗತಿಕ ಸಮರ ನಡೆಸಬೇಕು. ಬದಲಾಗಿ ಎಲ್ಲಾ ವಿಷಯದಲ್ಲೂ ರಾಜಕೀಯ ಮಾಡುವುದರಲ್ಲಿ ಏನು ಉಪಯೋಗವೂ ಆಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತದ ಭೂಮಿಯನ್ನು ಅತಿಕ್ರಮಣ ಮಾಡಿದ ಚೀನಾ ಈಗ ನೇಪಾಳದ ಭೂಪ್ರದೇಶವನ್ನು ಅತಿಕ್ರಮಿಸಿದೆ ಎಂದು ವರದಿಯಾಗಿದೆ.