ಸೌದಿ ಅರೇಬಿಯಾ, ಸೆ 23(DaijiworldNews/PY): ಕೊರೊನಾ ಪ್ರಕರಣ ಹೆಚ್ಚುತ್ತಿರುವ ಕಾರಣ ಭಾರತ, ಬ್ರೆಜಿಲ್ ಹಾಗೂ ಅರ್ಜೆಂಟೀನಾದಿಂದ ಆಗಮಿಸುವ ವಿಮಾನಗಳ ಸಂಚಾರಕ್ಕೆ ಸೌದಿ ಅರೇಬಿಯಾ ಮಂಗಳವಾರದಿಂದ ನಿರ್ಬಂಧ ವಿಧಿಸಿದೆ ಎಂದು ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ನಿಯಂತ್ರಕ ಸಚಿವಾಲಯ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಮಂಗಳವಾರ ಜಿಎಸಿಎಯು ಹೊರಡಿಸಿರುವ ಸುತ್ತೋಲೆ ಪ್ರಕಾರ, ಕಳೆದ 14 ದಿನಗಳಲ್ಲಿ ಭಾರತ, ಬ್ರೆಜಿಲ್ ಹಾಗೂ ಅರ್ಜೆಂಟೀನಾದಿಂದ ಸೌದಿ ಅರೇಬಿಯಾಕ್ಕೆ ಬರುವ ಮೊದಲು ಈ ದೇಶಗಳಿಗೆ ಸರ್ಕಾರದ ಆಹ್ವಾನವನ್ನು ಹೊರತುಪಡಿಸಿ, ಯಾವುದೇ ವ್ಯಕ್ತಿಗೆ ಒಳಗಡೆ ಪ್ರವೇಶಿಸಲು ಅವಕಾಶವಿಲ್ಲ ಎಂದು ತಿಳಿಸಿದೆ.
ಸೌದಿ ಅರೇಬಿಯಾಕ್ಕೆ ಭಾರತೀಯ ವಿಮಾನಯಾನ ಸಂಸ್ಥೆಗಳು ಯಾವುದೇ ವಿಮಾನ ಹಾರಾಟಕ್ಕೆ ಅನುಮತಿ ನೀಡುವುದಿಲ್ಲ. ಸೆಪ್ಟೆಂಬರ್ 24ರಿಂದ ಕೊಲ್ಲಿ ರಾಷ್ಟ್ರದಿಂದ ಯಾವುದೇ ವಿಮಾನಗಳನ್ನು ಭಾರತಕ್ಕೆ ಹಾರಲು ಅವಕಾಶ ಕಲ್ಪಿಸುವುದಿಲ್ಲ ಎಂದು ವಿಮಾನಯಾನ ಅಧಿಕಾರಿ ಮಾಹಿತಿ ನೀಡಿದ್ದಾರೆ.
ದುಬೈಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವೊಂದರಲ್ಲಿ, ಇಬ್ಬರು ಪ್ರಯಾಣಿಕರಲ್ಲಿ ಕೊರೊನಾ ಪಾಸಿಟಿವ್ ಆಗಿರುವುದು ಕಂಡುಬಂದಿದ್ದು, ಇದರ ಬೆನ್ನಲ್ಲೇ ಅಧಿಕಾರಿಗಳು ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 3 ರವರೆಗೆ ಭಾರತದಿಂದ ದುಬೈಗೆ ವಿಮಾನಗಳನ್ನು 15 ದಿನಗಳವರೆಗೆ ಸ್ಥಗಿತಗೊಳಿಸಿದ್ದಾರೆ.