ನ್ಯೂಯಾರ್ಕ್, ಸೆ 27(DaijiworldNews/PY): ಕೊರೊನಾ ವಿರುದ್ದ ಹೋರಾಡುತ್ತಿರುವ ಇತರ ರಾಷ್ಟ್ರಗಳಿಗೆ ಸಹಾಯ ಮಾಡುವಲ್ಲಿ ಭಾರತವು ತನ್ನ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಬಳಸುತ್ತದೆ ಎಂಬ ಪ್ರಧಾನಿ ಮೋದಿ ಅವರ ಭರವಸೆಯ ಹೇಳಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಶ್ಲಾಘಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ 75ನೇ ಅಧಿವೇಶನವನ್ನು ಉದ್ಧೇಶಿಸಿ ಮಾತನಾಡುವ ಸಂದರ್ಭ ಈ ಭರವಸೆಯನ್ನು ನೀಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಅವರು, ಪ್ರಧಾನಿ ಮೋದಿ ಅವರೇ ನಿಮಗೆ ಧನ್ಯವಾದಗಳು. ಸಾಮಾನ್ಯ ಒಳಿತಿಗಾಗಿ ಶಕ್ತಿ ಹಾಗೂ ಸಂಪನ್ಮೂಲಗಳನ್ನು ಒಟ್ಟಾಗಿಸಿ ಮುನ್ನಡೆದಾಗ ಮಾತ್ರವೇ ಕೊರೊನಾದ ವಿರುದ್ದ ನಾವು ಯಶಸ್ಸು ಸಾಧಿಸಲು ಸಾಧ್ಯ ಎಂದಿದ್ದಾರೆ.
ಭಾರತದಲ್ಲಿ ಉತ್ಪಾದಿಸಲಾಗುವ ಲಸಿಕೆಯನ್ನು ಇತರ ದೇಶಗಳಿಗೆ ಪೂರೈಕೆ ಮಾಡಲಾಗುವುದು. ಕೊರೊನಾ ವಿರುದ್ದ ಹೋರಾಟ ನಡೆಸುತ್ತಿರುವ ದೇಶಗಳಿಗೆ ಮಾನವೀಯ ನೆಲೆಯಲ್ಲಿ ನೆರವು ಮಾಡಲು ಸಿದ್ದ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದರು.