ಪೇಶಾವರ, ಸೆ 28 (DaijiworldNews/HR): ಬಾಲಿವುಡ್ ನಟರಾದ ರಾಜ್ ಕಪೂರ್ ಮತ್ತು ದಿಲೀಪ್ ಕುಮಾರ್ ಅವರ ಪೂರ್ವಜರ ಐತಿಹಾಸಿಕ ಮನೆಗಳನ್ನು ಖರೀದಿಸಲು ಪಾಕಿಸ್ತಾನದ ಖೈಬರ್ ಪಖ್ತೂನ್ ಖವಾದ ಪ್ರಾಂತೀಯ ಸರ್ಕಾರ ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ನಟರಾದ ರಾಜ್ ಕಪೂರ್ ಮತ್ತು ದಿಲೀಪ್ ಕುಮಾರ್ ಅವರ ಪೂರ್ವಜರ ಐತಿಹಾಸಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಒಡೆಯಬೇಕಾದ ಸ್ಥಿತಿಯನ್ನು ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ಖೈಬರ್ ಪಾಖ್ತುನ್ ಖವಾ ಪ್ರಾಂತ್ಯದ ಪುರಾತತ್ವ ಇಲಾಖೆ ಈ ಎರಡು ಕಟ್ಟಡಗಳನ್ನು ಖರೀದಿಸಲು ಅಗತ್ಯವಾದ ಹಣಕಾಸು ಬಿಡುಗಡೆಗೆ ನಿರ್ಧರಿಸಿದೆ.
ಇಬ್ಬರು ದಿಗ್ಗಜರ ಪೂರ್ವಜರ ಮನೆಗಳನ್ನು ರಾಷ್ಟ್ರೀಯ ಪಾರಂಪರಿಕ ತಾಣವನ್ನಾಗಿ ಘೋಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಐತಿಹಾಸಿಕ ಕಟ್ಟಡಗಳಿಗೆ ಎಷ್ಟು ವೆಚ್ಚ ತಗಲಬಹುದು ಎಂಬ ಬಗ್ಗೆ ಮಾಹಿತಿ ನೀಡುವಂತೆ ಪೇಶಾವರದ ಡೆಪ್ಯುಟಿ ಕಮಿಷನರ್ ಗೆ ಈಗಾಗಲೇ ಪತ್ರ ರವಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಟ ರಾಜ್ ಕಪೂರ್ ಅವರ ಪೂರ್ವಜರ ಮನೆ 'ಕಪೂರ್ ಹವೇಲಿ' ಎಂದೇ ಕರೆಯಲಾಗುತ್ತಿದೆ. ಈ ಮನೆಯನ್ನು 1918 ಮತ್ತು 1922ರ ನಡುವೆ ದಂತಕತೆ ನಟ ಕಪೂರ್ ಅಜ್ಜ ದೀವಾನ್ ಬಾಶೇವರ್ನಾಥ್ ಕಪೂರ್ ಕಟ್ಟಿಸಿದ್ದರು.