ಕುವೈಟ್, ಸೆ. 29 (DaijiworldNews/SM): ಕುವೈಟ್ ನ ಎಮಿರ್ ಶೇಖ್ ಸಬಾ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾ(91) ಅವರು ಸೆಪ್ಟೆಂಬರ್ 29 ರ ಮಂಗಳವಾರ ಯುನೈಟೆಡ್ ಸ್ಟೇಟ್ಸ್ನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಯಲ್ ವ್ಯವಹಾರಗಳ ಉಸ್ತುವಾರಿ ಸಚಿವ ಶೇಖ್ ಅಲಿ ಜರ್ರಾ ಅಲ್-ಸಬಾ ಅವರು, "ಬಹಳ ದುಃಖದ ದಿನವಾಗಿದೆ. ಕುವೈತ್ ರಾಜ್ಯದ ಎಮಿರ್ ಶೇಖ್ ಸಬಾ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾ ಅವರ ನಿಧನರಾಗಿದ್ದು, ಅವರ ನಿಧನಕ್ಕೆ ನಾವು ಸಂತಾಪ ವ್ಯಕ್ತಪಡಿಸುತ್ತೇವೆ" ಎಂದು ಹೇಳಿದ್ದಾರೆ.
1929 ರಲ್ಲಿ ಜನಿಸಿದ ಶೇಖ್ ಸಬಾ ಅವರು ಆಧುನಿಕ ಕುವೈತ್ನ ವಿದೇಶಾಂಗ ನೀತಿಯ ವಾಸ್ತುಶಿಲ್ಪಿ ಎಂದು ಗುರುತಿಸಲ್ಪಟ್ಟಿದ್ದರು. ಅವರು ಪ್ರಧಾನಿಯಾಗುವ ಮುನ್ನ 1963ರಿಂದ 2003ರ ತನಕ ಸುಮಾರು 40 ವರ್ಷಗಳ ಕಾಲ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಶೇಖ್ ಸಬಾ ಅವರ ಮಗಳು ಸಾಲ್ವಾ 2002ರಲ್ಲಿ ಕ್ಯಾನ್ಸರ್ ಗೆ ಬಲಿಯಾಗಿದ್ದು, ಆಕೆಯ ನೆನಪಿಗಾಗಿ ನಿರ್ಮಿಸಲಾದ ದಾರ್ ಸಾಲ್ವಾ ಎಂಬ ಅರಮನೆಯಲ್ಲಿ ವರ್ಷಗಳ ಕಾಲ ಅವರು ವಾಸವಾಗಿದ್ದರು. ಶೇಖ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಶೇಖ್ ಜಬೆರ್ ಅಲ್-ಅಹ್ಮದ್ ಅಲ್-ಸಬಾ ಅವರ ನಿಧನದ ಬಳಿಕ 2006ರ ನಂತರ ಶೇಖ್ ಸಬಾ ಅವರು ಕುವೈಟ್ ನ ಎಮಿರ್ ಆಗಿ ಸೇವೆ ಆರಂಭಿಸಿದರು. ಇನ್ನು 2020ರ ಜುಲೈ ತಿಂಗಳಲ್ಲಿ ಅನಾರೋಗ್ಯದ ಕಾರಣದಿಂದಾಗಿ ಶೇಖ್ ಸಬಾ ಅವರು, ಯುನೈಟೆಡ್ ಸ್ಟೇಟ್ಸ್ ಆಸ್ಪತ್ರೆಗೆ ದಾಖಲಾದರು.