ವಾಷಿಂಗ್ಟನ್, ಸೆ 30(DaijiworldNews/PY): ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೆ ಇನ್ನು ಕೇವಲ 35 ದಿನಗಳು ಮಾತ್ರವೇ ಬಾಕಿ ಇದ್ದು, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರತಿಸ್ಪರ್ಧಿ ಜೋ ಬಿಡೆನ್ ಅವರ ನಡುವೆ ಬುಧವಾರ ಮಾತಿನ ಚಕಮಕಿ ನಡೆದಿದೆ.
ಇಬ್ಬರೂ ಕೂಡಾ ವೇದಿಕೆಗೆ ಬಂದ ಸಂದರ್ಭ ಪರಸ್ಪರ ಹಸ್ತಲಾಗವ ಮಾಡಿಕೊಂಡಿಲ್ಲ. ಈ ವೇಳೆ ಕೊರೊನಾ ನಿರ್ಬಂಧಗಳಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು.
ಕ್ಲೀವ್ಲ್ಯಾಂಡ್ನ ವೇದಿಕೆಯಲ್ಲಿ ಇಬ್ಬರು ನಾಯಕರು ಭೇಟಿಯಾಗಿದ್ದು. ಸುಮಾರು 90 ನಿಮಿಷಗಳ ಕಾಲ ಬಹಿರಂಗವಾಗಿ ಚರ್ಚಿಸಿದ್ದಾರೆ. ನವೆಂಬರ್ 3ರಂದು ಚುನಾವಣೆ ನಿಗದಿಯಾಗಿದೆ.
ಈ ವೇಳೆ ಮಾತನಾಡಿದ ಬಿಡೆನ್, ಇವರು ಇಲ್ಲಿಯವರೆಗೆ ಹೇಳಿದ್ದೆಲ್ಲಾ ಸುಳ್ಳಾಗಿದೆ. ಆದರೆ, ನಾನು ಸುಳ್ಳುಗಳನ್ನು ಮೇಲೆತ್ತಿ ತೋರಲು ಬಂದಿಲ್ಲ. ಈತ ಸುಳ್ಳುಗಾರನೆಂದು ಎಲ್ಲರಿಗೂ ತಿಳಿದಿದೆ ಎಂದರು.
ಇಬ್ಬರ ನಡುವೆ ಚರ್ಚೆ ನಡೆದಿದ್ದು, ಈ ನಡುವೆ ಒಬ್ಬರ ಮಾತಿನ ನಡುವೆ ಮತ್ತೊಬ್ಬ ಮಾತನಾಡುತ್ತಿದ್ದರು. ಚರ್ಚೆ ನಡೆಯುತ್ತಿದ್ದ ವೇಳೆ ಬಿಡೆನ್ ಅವರು, ಸ್ವಲ್ಪ ಬಾಯಿ ಮುಚ್ಚುತ್ತೀರಾ ಎಂದು ಕಿಡಿಕಾರಿದ್ದರು.
ಡೊನಾಲ್ಡ್ ಟ್ರಂಪ್ ಅವರಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎದುರಿಸಲು ಆಗುತ್ತಿಲ್ಲ ಎಂದು ಬೈಡನ್ ಆರೋಪಿಸಿದ್ದು, ಪುಟಿನ್ ಅವರ ಪಪ್ಪಿ ಆಗಿದ್ದಾರೆ ಎಂದು ಹೇಳಿದ್ದಾರೆ.