ಕೊಲಂಬೊ, ಸೆ. 30 (DaijiworldNews/MB) : ಪ್ರಧಾನಿ ಮಹಿಂದಾ ರಾಜಪಕ್ಸ ನೇತೃತ್ವದ ಶ್ರೀಲಂಕಾ ಸರ್ಕಾರವು ಜಾನುವಾರು ಹತ್ಯೆ ನಿಷೇಧಕ್ಕೆ ಅನುಮೋದನೆ ನೀಡಿದೆ. ಹಾಗೆಯೇ ಮಾಂಸ ಸೇವಿಸುವವರಿಗಾಗಿ ಜಾನುವಾರು ಮಾಂಸ ಆಮದು ಮಾಡಿಕೊಳ್ಳಲು ತೀರ್ಮಾನಿಸಿದೆ.
ಈ ಬಗ್ಗೆ ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಶ್ರೀಲಂಕಾ ಸರ್ಕಾರದ ಮಾಧ್ಯಮ ಸಚಿವ ಕೆಹೇಲಿಯಾ ರಂಬುಕ್ವೆಲ್ಲಾ ಅವರು, ಸಚಿವ ಸಂಪುಟ ಸಭೆಯಲ್ಲಿ ಜಾನುವಾರು ಹತ್ಯೆ ನಿಷೇಧದ ತೀರ್ಮಾಣ ಮಾಡಲಾಗಿದ್ದು ಇದನ್ನು ಕಾನೂನು ಬದ್ದಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 8ರಂದು ಪ್ರಧಾನಿ ಮಹಿಂದಾ ರಾಜಪಕ್ಸ ನೇತೃತ್ವದ ಆಡಳಿತಾರೂಡ ಪಕ್ಷ ಎಸ್ಎಲ್ಪಿಪಿಯು ಶಾಸಕಾಂಗ ಸಭೆಯಲ್ಲಿ ಜಾನುವಾರು ಹತ್ಯೆ ನಿಷೇಧದ ಪ್ರಸ್ತಾವವನ್ನು ಮುಂದಿರಿಸಿತ್ತು. ಸಚಿವ ಸಂಪುಟವು ಜಾನುವಾರು ಕಾಯ್ದೆಗೆ ತಿದ್ದುಪಡಿ ತರಲು ಮಸೂದೆ ಮಂಡನೆಗೆ ನಿರ್ಧಾರಿಸಿದೆ. ಹಾಗೆಯೇ ಮಾಂಸಾಹಾರ ಸೇವಿಸುವವರಿಗೆ ಇತರ ದೇಶಗಳಿಂದ ಆಮದು ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ 2012ರ ಜನಸಂಖ್ಯಾ ಗಣತಿಯಂತೆ 2 ಕೋಟಿ ನಾಗರಿಕರಿದ್ದಾರೆ. ಈ ಪೈಕಿ ಶೇ 70ರಷ್ಟು ಬೌದ್ಧ, ಶೇ 12.58 ರಷ್ಟು ಹಿಂದೂ, ಶೇ 9.66 ಇಸ್ಲಾಂ, 7.62 ಕ್ರೈಸ್ತ ಹಾಗೂ ಇತರೆ ಧರ್ಮಗಳಿಗೆ ಸೇರಿದ 0.03ರಷ್ಟು ಮಂದಿ ಇದ್ದಾರೆ. ಇಲ್ಲಿನ ಬಹುಸಂಖ್ಯಾತ ಬೌದ್ಧರು ಮತ್ತು ಹಿಂದೂಗಳು ಜಾನುವಾರು ಮಾಂಸ ಸೇವಿಸುವುದಿಲ್ಲ ಎಂದು ವರದಿ ತಿಳಿಸಿದೆ.