ವಾಷಿಂಗ್ಟನ್, ಅ. 03 (DaijiworldNews/HR): ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ಈಗಾಗಲೇ ಕೊರೊನಾ ಸೋಂಕು ತಗುಲಿದ್ದು, ಇದೀಗ ವೈದ್ಯರ ಸಲಹೆ ಮೇರೆಗೆ ಟ್ರಂಪ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದುಬಂದಿದೆ.
ಈ ಕುರಿತು ಟ್ವೀಟರ್ನಲ್ಲಿ ವಿಡಿಯೋ ಮಾಡಿರುವ ಟ್ರಂಪ್, ಅಪಾರ ಬೆಂಬಲ ನೀಡಿದ ಪ್ರತೀಯೊಬ್ಬರಿಗೂ ಧನ್ಯವಾದ ಹೇಳುತ್ತಿದ್ದೇನೆ. ವಾಲ್ಟರ್ ರೀಡ್ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಆರೋಗ್ಯವಾಗಿದ್ದೇನೆ. ಅಲ್ಲಿಂದಲೇ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ. ಪತ್ನಿ ಮೆಲಾನಿಯಾ ಟ್ರಂಪ್ ಕೂಡ ಉತ್ತಮವಾಗಿದ್ದಾರೆಂದು ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಇನ್ನು ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಟ್ರಂಪ್ ವಾಲ್ಟರ್ ರೀಡ್ ಮಿಲಿಟರಿ ಮೆಡಿಕಲ್ ಸೆಂಟರ್ ಗೆ ದಾಖಲಾಗಿದ್ದಾರೆ. ಅಲ್ಲಿ ಅವರು ಮುಂದಿನ ಹಲವು ದಿನಗಳ ಕಾಲ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಆಸ್ಪತ್ರೆಯಿಂದಲೇ ಅಧ್ಯಕ್ಷೀಯ ಕಾರ್ಯ ಕಲಾಪಗಳನ್ನು ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಟ್ರಂಪ್ ಗೆ ಕೊರೊನಾ ಸೋಂಕಿನ ಲಘು ಲಕ್ಷಣಗಳು ಕಾಣಿಸಿಕೊಂಡಿದ್ದು, ಆರೋಗ್ಯಕರವಾಗಿ ಹಾಗೂ ಉತ್ಸಾಹದಿಂದಿದ್ದಾರೆ. ನವಂಬರ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಹಾಗೂ ಉಳಿದ ಅವಧಿಯ ಅಧ್ಯಕ್ಷೀಯ ಅವಧಿಗೆ ಮುಂದುವರಿಯಲಿದ್ದಾರೆ ಎಂದು ಶ್ವೇತಭವನ ಶುಕ್ರವಾರ ಹೇಳಿತ್ತು.