ಬೆತೆಸ್ಡ, ಅ. 04(DaijiworldNews/PY): ಕೊರೊನಾ ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯುತ್ತಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಸದ್ಯ ನಾನು ಆರಾಮವಾಗಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ನಾನು ಈಗ ಆರಾಮವಾಗಿದ್ದೇನೆ. ಅಲ್ಲದೇ ಚೇತರಿಸಿಕೊಳ್ಳುತ್ತಿದ್ದೇನೆ. ಮುಂದಿನ 48 ಗಂಟೆಗಳು ನಿರ್ಣಾಯಕವಾಗಿದೆ ಎಂದಿದ್ದಾರೆ.
ನನ್ನ ಆರೋಗ್ಯದಲ್ಲಿ ಏರಿಳಿತ ಕಂಡ ಕಾರಣ ನಾನು ಆಸ್ಪತ್ರೆಗೆ ದಾಖಲಾದೆ. ಈಗ ನನ್ನ ಆರೋಗ್ಯ ಸುಧಾರಿಸಿದೆ. ಆಸ್ಪತ್ರೆಯ ವೈದ್ಯರು ಚೆನ್ನಾಗಿ ಶುಶ್ರೂಷೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಟ್ರಂಪ್ ಅವರಿಗೆ ಕೊರೊನಾ ದೃಢಪಟ್ಟ ಬಳಿಕ ಅವರ ಆರೋಗ್ಯದಲ್ಲಿ ಏರಿಳಿತ ಕಂಡುಬಂದ ಕಾರಣ ಅವರನ್ನು ವಾಲ್ಟರ್ ರೀಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.