ವಾಷಿಂಗ್ಟನ್, ಅ.08(DaijiworldNews/PY): ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊರೊನಾ ನಿಭಾಯಿಸಿದ ರೀತಿ ಅಮೇರಿಕಾದ ಇತಿಹಾಸದಲ್ಲೇ ದೊಡ್ಡ ವೈಫಲ್ಯ ಎಂದು ಉಪಾಧ್ಯಕ್ಷ ಸ್ಥಾನದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಬುಧವಾರ ರಾತ್ರಿ ಉತಾಹ್ ನಗರದ ಸಾಲ್ಟ್ ಲೇಕ್ ಸಿಟಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಕೊರೊನಾ ನಿಭಾಯಿಸುವ ಬಗ್ಗೆ ಅಮೇರಿಕಾ ಅಧ್ಯಕ್ಷರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಟ್ರಂಪ್ ಆಡಳಿತದ ಸಂದರ್ಭ ಕೊರೊನಾ ಲಸಿಕೆ ದೊರಕಿದರೆ, ಅದನ್ನು ವೈಜ್ಞಾನಿಕ ಸಲಹೆಗಾರರು ತೆಗೆದುಕೊಳ್ಳುವುದಿಲ್ಲ. ಅಲ್ಲದೇ, ನಾನು ಕೂಡಾ ಸ್ವೀಕರಿಸುವುದಿಲ್ಲ. ಒಂದು ವೇಳೆ ಆ ಲಸಿಕೆಯನ್ನು ದೇಶದ ಉನ್ನತ ವೈಜ್ಞಾನಿಕ ಸಲಹೆಗಾರರಾದ ಡಾ. ಆಂಥೋನಿ ಫೌಸಿ ಅವರು ಅಂಗೀಕರಿಸಿದರೆ ಮಾತ್ರ ನಾನು ಆ ಲಸಿಕೆಯನ್ನು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ಹ್ಯಾರಿಸ್ ಅವರ ಹೇಳಿಕೆಗೆ ಕೋಪಗೊಂಡ ಪೆನ್ಸ್ ಅವರು, ಹ್ಯಾರಿಸ್ ಅವರು ಟ್ರಂಪ್ ಅವರ ವಿಶ್ವಾಸಾರ್ಹತೆಯ ಮೇಲೆ ದಾಳಿ ನಡೆಸುವ ಮುಖೇನ ಕೊರೊನಾ ಲಸಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಅವಿಸ್ವಾಸ ಮೂಡಿಸುತ್ತಿದ್ದಾರೆ ಎಂದಿದ್ದಾರೆ.
ಕಮಲಾ ಹ್ಯಾರಿಸ್ ಅವರು ಚರ್ಚೆಯಲ್ಲಿ ಮಾತನಾಡಿದ್ದರ ಬಗ್ಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ಶ್ಲಾಘಿಸಿದ್ದು, ಹ್ಯಾರಿಸ್ ಅವರು ನಾವೆಲ್ಲರೂ ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದಿದ್ದಾರೆ.