ವಾಷಿಂಗ್ಟನ್, ಅ. 11 (DaijiworldNews/MB) : ಒಂಬತ್ತು ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಶನಿವಾರ ಶ್ವೇತ ಭವನದ ಬಾಲ್ಕನಿಯಲ್ಲಿ ನಿಂತು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದು ಕೊರೊನಾ ವೈರಸ್ ಮಾಯವಾಗುತ್ತೆ, ಅದು ಈಗಾಗಲೇ ಇಲ್ಲವಾಗುತ್ತಿದೆ ಎಂದು ಹೇಳಿದ್ದಾರೆ.
ಶನಿವಾರ ಶ್ವೇತ ಭವನದ ಬಾಲ್ಕನಿಯಲ್ಲಿ ಮಾಸ್ಕ್ನ್ನು ತೆಗೆದು ಬೆಂಬಲಿಗರ ಮುಂದೆ ಹಾಜರಾಗಿದ್ದ ಟ್ರಂಪ್ ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ 18 ನಿಮಿಷಗಳ ಕಾಲ ಮಾತನಾಡಿದರು. ನಾನು ಈಗ ಆರೋಗ್ಯವಾಗಿದ್ದೇನೆ. ನಮ್ಮ ದೇಶವು ಈ ಚೀನಾ ವೈರಸ್ನ್ನು ಹೊಡೆದೋಡಿಸುತ್ತದೆ. ಕೊರೊನಾ ವೈರಸ್ ಮಾಯವಾಗುತ್ತೆ. ಅದು ಈಗಾಗಲೇ ಇಲ್ಲವಾಗುತ್ತಿದೆ. ನೀವು ಹೊರಬನ್ನಿ ಮತದಾನ ಮಾಡಿ. ಐ ಲವ್ ಯೂ ಎಂದು ಹೇಳಿದರು.
ಇನ್ನು ಟ್ರಂಪ್ ಭಾಷಣ ಕೇಳಲು ಶ್ವೇತ ಭವನದ ಹೊರಗೆ ನೆರೆದಿದ್ದ ಬೆಂಬಲಿಗರಲ್ಲಿ ಹೆಚ್ಚಿನವರು ಮಾಸ್ಕ್ ಧರಿಸಿದ್ದು ಆದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ ಎಂದು ಹೇಳಲಾಗಿದೆ.
ನವೆಂಬರ್ 3ರಂದು ಅಮೇರಿಕಾ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್ ಹಾಗೂ ಜೋ ಬಿಡೆನ್ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಟ್ರಂಪ್ಗೆ ಕೊರೊನಾ ಸೋಂಕು ದೃಢಪಟಡುವುದಕ್ಕೂ ಮುನ್ನ ನಡೆದ ಚುನಾವಣೆ ಬಹಿರಂಗ ಚರ್ಚೆಯಲ್ಲಿ ಇಬ್ಬರು ಕೂಡಾ ಮುಖಾಮುಖಿಯಾಗಿದ್ದರು. ಇನ್ನು ಈ ನಡುವೆ ಅಮೇರಿಕಾದಲ್ಲಿ ಕೊರೊನಾ ಸೋಂಕು ನಿರ್ವಹಣೆಯಲ್ಲಿ ಉಂಟಾಗಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷ ಟ್ರಂಪ್ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಅತೀ ಕಡಿಮೆಯಾಗಿದೆ.