ಪ್ಯಾನ್ಯಾಂಗ್, ಅ. 11 (DaijiworldNews/PY): ಜಗತ್ತೇ ಕೊರೊನಾ ಸೋಂಕಿನಿಂದ ತತ್ತರಿಸುತ್ತಿದೆ. ಆದರೆ, ಉತ್ತರ ಕೊರಿಯಾದಲ್ಲಿ ಈವರೆಗೆ ಯಾರಿಗೂ ಕೂಡಾ ಸೋಂಕು ಬಂದಿಲ್ಲ ಎಂದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದಾರೆ.
ಶನಿವಾರ ಉತ್ತರ ಕೊರಿಯಾದ ಆಡಳಿತಾರೂಢ ವರ್ಕರ್ಸ್ ಪಕ್ಷದ 75ನೇ ಸಂಸ್ಥಾಪನಾ ವರ್ಷಾಚರಣೆ ನಡೆಯಿತು. ಈ ವೇಳೆ ವಾಹಿನಿಯ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತರ ಕೊರಿಯಾದಲ್ಲಿ ಈವರೆಗೆ ಯಾರೂ ಕೂಡಾ ಕೊರೊನಾ ಸೋಂಕಿಗೆ ತುತ್ತಾಗಿಲ್ಲ. ಇಂತಹ ಸಂಕಷ್ಟ ಪರಿಸ್ಥಿತಿಯ ಸಂದರ್ಭ ದೇಶದ ನಾಗರಿಕರು ಮುಂಜಾಗ್ರತೆ ಹಾಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಉತ್ತರ ಕೊರಿಯಾದ ಜನ ಸೋಂಕಿಗೆ ತುತ್ತಾಗದೇ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದು, ವಿಜಯಶಾಲಿಯಾಗಿದ್ದಾರೆ. ಇಡೀ ವಿಶ್ವವೇ ಕೊರೊನಾದಿಂದ ತತ್ತರಿಸುತ್ತಿದೆ. ಈ ನಡುವೆ ಉತ್ತರ ಕೊರಿಯಾಕ್ಕೆ ಯಾವುದೇ ಸಮಸ್ಯೆ ಬಾಧಿಸದೇ ಇರುವುದು ಸಂತೋಷದ ವಿಷಯ ಎಂದು ಕಿಮ್ ಹೇಳಿದ್ದಾರೆ.
ಕೊರೊನಾ ವೈರಸ್ ಮೊದಲು ಚೀನಾದ ವುಹಾನ್ ನಗರದಲ್ಲಿ ಆರಂಭವಾಗಿದ್ದು, ಆದರೆ, ಚೀನಾದ ಗಡಿಯನ್ನು ಹಂಚಿಕೊಂಡಿರುವ ಉತ್ತರ ಕೊರಿಯಾಕ್ಕೆ ಕೊರೊನಾ ಸೋಂಕು ಬಾಧಿಸಿಲ್ಲ.