ಇಸ್ಲಾಮಾಬಾದ್, ಅ. 14 (DaijiworldNews/PY): ಪಾಕ್ನಲ್ಲಿ ಮಾನವ ಹಕ್ಕುಗಳು ದಾಖಲೆಗಳ ಬಗ್ಗೆ ಕಾರ್ಯಕರ್ತರ ಗುಂಪುಗಳ ವಿರೋಧದ ಹೊರತಾಗಿಯೂ ಪಾಕಿಸ್ತಾನ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಮತ್ತೆ ಆಯ್ಕೆಯಾಗಿದೆ.
ವಿಶ್ವಸಂಸ್ಥೆಯ ಪ್ರಥಮ ಮಾನವ ಹಕ್ಕು ಸಂಸ್ಥೆಯಲ್ಲಿ ನಾಲ್ಕು ಸ್ಥಾನಗಳಿಗೆ ಸ್ಪರ್ಧಿಸುತ್ತಿರುವ ಏಷ್ಯಾ-ಫೆಸಿಫಿಕ್ ವಲಯದ ಐದು ಅಭ್ಯರ್ಥಿಗಳ ಪೈಕಿ ಪಾಕಿಸ್ತಾನ ಅತಿ ಹೆಚ್ಚು ಮತಗಳನ್ನು ಗಳಿಸಿದೆ ಎಂದು ವಿದೇಶಾಂಗ ಕಚೇರಿ ತಿಳಿಸಿದೆ.
ವಿಶ್ವಸಂಸ್ಥೆಯ 193 ಸದಸ್ಯರ ಜನರಲ್ ಅಸೆಂಬ್ಲಿಯಲ್ಲಿ ನಡೆದ ರಹಸ್ಯ ಮತದಾನದಲ್ಲಿ ಪಾಕಿಸ್ತಾನ 169, ಉಜ್ಬೇಕಿಸ್ತಾನ 164, ನೇಪಾಳ 150, ಚೀನಾ 139 ಹಾಗೂ ಸೌದಿ ಅರೇಬಿಯಾ ಕೇವಲ 90 ಮತಗಳನ್ನು ಪಡೆದುಕೊಂಡಿದೆ.
ಕಳೆದ ವಾರ ಯುರೋಪ್ನ ಮಾನವ ಹಕ್ಕುಗಳ ಗುಂಪು, ಅಮೆರಿಕ ಮತ್ತು ಕೆನಡಾ ರಾಷ್ಟ್ರಗಳು, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಚುನಾವಣೆಗೆ ಸ್ಪರ್ಧಿಸಿದ್ದ ಚೀನಾ, ರಷ್ಯಾ, ಸೌದಿ ಅರೇಬಿಯಾ, ಕ್ಯೂಬಾ, ಪಾಕಿಸ್ತಾನ ಹಾಗೂ ಉಜ್ಬೇಕಿಸ್ತಾನ ದೇಶಗಳನ್ನು ವಿರೋಧಿಸುವಂತೆ ಕರೆ ನೀಡಿತ್ತು. ಅವರ ಮಾನವ ಹಕ್ಕುಗಳ ದಾಖಲೆಗಳು ಅವರನ್ನು ಅನರ್ಹರನ್ನಾಗಿ ಮಾಡಿವೆ ಎಂದು ಹೇಳಿವೆ.
ರಷ್ಯಾ ಹಾಗೂ ಕ್ಯೂಬಾ ಕೂಡಾ ಅವಿರೋಧವಾಗಿ ಸ್ಪರ್ಧಿಸಿ ಸ್ಥಾನಗಳನ್ನು ಪಡೆದುಕೊಂಡಿವೆ. ಪಾಕಿಸ್ತಾನ 2018ರ ಜನವರಿ 1ರಿಂದ ಎಚ್ಆರ್ಸಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಇದೀಗ ಮರು ಆಯ್ಕೆಯಾಗಿದ್ದು, 2021ರ ಜನವರಿ 1ರಿಂದ ಪ್ರಾರಂಭವಾಗಿ ಇದರ ಸದಸ್ಯತ್ವದ ಅವಧಿ ಮೂರು ವರ್ಷ ಮುಂದುವರೆಯಲಿದೆ. ಪಾಕಿಸ್ತಾನ 2018 ಜ.1 ರಿಂದ ಎಚ್ಆರ್ಸಿಯ ಸದಸ್ಯ ರಾಷ್ಟ್ರವಾಗಿದ್ದು, ಇದೀಗ ಮರು ಆಯ್ಕೆಯಾಗಿದ್ದು, ಇದರ ಸದಸ್ಯತ್ವ ಅವಧಿ ಮೂರು ವರ್ಷವಾಗಿದೆ.