ಬೀಜಿಂಗ್, ಅ. 18 (DaijiworldNews/PY): ಆಮದು ಮಾಡಿಕೊಂಡ ಹಾಗೂ ಶೀತಲೀಕರಿಸಿದ ಮೀನಿನ ಪೊಟ್ಟಣದ ಮೇಲೆ ಜೀವಂತ ಕೊರೊನಾ ವೈರಸ್ ಪತ್ತೆಯಾಗಿರುವುದನ್ನು ಚೀನಾದ ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಶೀತಲೀಕರಿಸಿದ ಆಹಾರದ ಪೊಟ್ಟಣದ ಮೇಲೆ ಕಂಡುಬಂದ ಜೀವಂತ ಕೊರೊನಾ ವೈರಸ್ ಅನ್ನು ವಿಶ್ವದಲ್ಲೇ ಮೊದಲ ಬಾರಿಗೆ ಪತ್ತೆ ಮಾಡಿ, ಪ್ರತ್ಯೇಕಿಸಲಾಗಿದೆ. ಇದು ಬಂದರು ನಗರ ಚಿಂಗ್ದಾವ್ನಲ್ಲಿ ಪತ್ತೆಯಾಗಿದೆ ಎಂದು ಸಿಡಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಚಿಂಗ್ದಾವ್ ನಗರದಲ್ಲಿ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಭೀತಿ ಉಂಟಾಗಿದೆ. ಸುಮಾರು 11 ಕೋಟಿ ಜನರ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಯ ಬಳಿಕ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಆಮದು ಮಾಡಿಕೊಳ್ಳಲಾದ ಮೀನಿನ ಪೊಟ್ಟಣ ಸೋಂಕಿಗೆ ಒಳಗಾಗಿದೆ ಎಂದು ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಸಿಡಿಸಿ ಹೇಳಿದೆ. ಆದರೆ, ಯಾವ ದೇಶದಿಂದ ಇದನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಸಿಡಿಸಿ ಹೇಳಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಚೀನಾದ 24 ಪ್ರಾಂತ್ಯಗಳಿಂದ ಒಟ್ಟು 29 ಲಕ್ಷ ಮಾದರಿಗಳನ್ನು ಸಂಗ್ರಹಿಸಿ ಬಳಿಕ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 22 ಮಾದರಿಗಳಲ್ಲಿ ಮಾತ್ರವೇ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು ಎಂದು ಸಿಡಿಸಿ ಮಾಹಿತಿ ನೀಡಿದೆ.
ಆಮದು ಮಾಡಿದ ಪ್ರಕರಣಗಳಲ್ಲಿ ಐದು ಶಾಂಘೈನಲ್ಲಿ, ನಾಲ್ಕು ಗುವಾಂಗ್ಡಾಂಗ್ನಲ್ಲಿ, ಎರಡು ಶಾಂಕ್ಸಿ ಮತ್ತು ತಿಯಾಂಜಿನ್ ಮತ್ತು ಸಿಚುವಾನ್ನಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.