ವಿಶ್ವಸಂಸ್ಥೆ, ಅ. 20 (DaijiworldNews/PY): ಕೊರೊನಾ ಲಸಿಕೆ ಲಭ್ಯವಾಗುವ ಮುನ್ನವೇ, 2021ರ ವೇಳೆಗೆ ಸುಮಾರು 50 ಕೋಟಿ ಸಿರಿಂಜ್ಗಳನ್ನು ಸಂಗ್ರಹಿಸಿಡಲು ಯುನಿಸೆಫ್ ಸಜ್ಜಾಗಿದೆ.
ಈ ವರ್ಷಾಂತ್ಯದ ಮುನ್ನ ಸುಮಾರು 100 ಕೋಟಿ ಸಿರಿಂಜ್ಗಳನ್ನು ಸಂಗ್ರಹಿಸಿಡಲು ತೀರ್ಮಾನ ಕೈಗೊಂಡಿರುವ ಯುನಿಸೆಫ್, ಕೊರೊನಾ ಲಸಿಕೆ ಲಭ್ಯವಾಗುತ್ತಿದ್ದಂತೆ ಜನರಿಗೆ ಲಸಿಕೆ ನೀಡಲು ಸಹಾಯವಾಗುವಂತೆ ಈ ತೀರ್ಮಾನಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ತಿಳಿಸಿರುವ ಯುನಿಸೆಫ್, ಕೊರೊನಾ ಲಸಿಕೆಗಾಗಿ ಇಡೀ ಜಗತ್ತೇ ನಿರೀಕ್ಷಿಸುತ್ತಿದೆ. ಲಸಿಕೆ ಲಭ್ಯವಾಗುತ್ತಿದ್ದಂತೆ ಅದರ ಬಳಕೆಗೆ ಯಾವುದೇ ತೊಂದರೆಯಾಗಬಾರದು, ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಇದು ಮಾನವ ಕುಲದ ಇತಿಹಾಸದಲ್ಲಿಯೇ ಬೃಹತ್ ಸಾಮೂಹಿಕ ಲಸಿಕೆ ಕಾರ್ಯಕ್ರಮವಾಗಲಿದ್ದು, ಸಮರೋಪಾದಿಯಲ್ಲಿ ಈ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭ ಮಾಡಬೇಕಿದೆ ಎಂದು ಯುನಿಸೆಫ್ನ ನಿರ್ದೇಶಕಿ ಹೆನ್ರಿಟಾ ಫೋರ್ ತಿಳಿಸಿದ್ದಾರೆ.
ಸಿರಿಂಜ್ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು. ಅಲ್ಲದೇ, ಒಮ್ಮೆ ಬಳಕೆ ಮಾಡಿದ ಸಿರಿಂಜ್ಗಳಿಂದ ಉಂಟಾಗಬಹುದಾದ ಯಾವುದೇ ಗಾಯಗಳನ್ನು ನಿರ್ಲಕ್ಷಿಸಬಾರದು. 50 ಲಕ್ಷ ಸುರಕ್ಷತಾ ಬಾಕ್ಸ್ಗಳನ್ನು ಖರೀದಿ ಮಾಡಲಾಗುತ್ತದೆ ಎಂದಿದ್ದಾರೆ.