ವಾಷಿಂಗ್ಟನ್, ಅ. 23 (DaijiworldNews/HR): ಕೊರೊನಾ ನಿಯಂತ್ರಣ ಸಂಬಂಧ ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದಾಗಿ ದೇಶ ಕರಾಳ ಚಳಿಗಾಲವನ್ನು ಎದುರಿಸಬೇಕಾದ ಸ್ಥಿತಿ ತಲುಪಿದೆ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಹೇಳಿದ್ದಾರೆ.
ಚುನಾವಣೆಗೆ ಮುನ್ನ ಆಯೋಜಿಸಿದ್ದಅಂತಿಮ ಮುಖಾಮುಖಿ ಚರ್ಚೆಯಲ್ಲಿ ಟ್ರಂಪ್ ಹಾಗೂ ಬಿಡೆನ್ ಪರಸ್ಪರ ವಾಕ್ಸಮರ ನಡೆಸಿದರು. ಮೊದಲಿಗೆ ಟ್ರಂಪ್ ವಿರುದ್ಧ ವಾಗ್ದಾಳಿ ಆರಂಭಿಸಿದ ಬಿಡೆನ್, ಕೊರೊನಾ ವಿರುದ್ಧದ ಹೋರಾಟಕ್ಕೆ ಟ್ರಂಪ್ ಬಳಿ ಯಾವುದೇ ನಿರ್ದಿಷ್ಟ ಕಾರ್ಯಯೋಜನೆ ಇರಲಿಲ್ಲ ಎಂದು ಆಪಾದಿಸಿದರು. ಇಷ್ಟೊಂದು ದೊಡ್ಡ ಸಂಖ್ಯೆಯ ಸಾವಿಗೆ ಕಾರಣರಾದ ಟ್ರಂಪ್, ಅಮೆರಿಕದ ಅಧ್ಯಕ್ಷರಾಗಿ ಮುಂದುವರಿಯಬಾರದು ಎಂದರು.
ಇನ್ನು ಕೊರೊನಾ ವೈರಸ್ ಅಪಾಯಕಾರಿ ಎಂದು ಟ್ರಂಪ್ ಜನತೆಗೆ ತಿಳಿಸಲೇ ಇಲ್ಲ. ಯಾವುದೇ ಭೀತಿಪಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಲೇ ಬಂದರು ಎಂದು ದೂರಿದ್ದಾರೆ.
ಇದಕ್ಕೆ ಸಮರ್ಥಿಸಿಕೊಂಡ ಟ್ರಂಪ್, ದೇಶವನ್ನು ಮುಚ್ಚಿ ಬಿಡೆನ್ ಅವರಂತೆ ಬೇಸ್ಮೆಂಟ್ನಲ್ಲಿ ವಾಸಿಸಲಾಗದು. ಜನ ಇಂದು ಕೊರೊನಾ ಜತೆ ಬದುಕುವ ವಿಧಾನ ಕಂಡುಕೊಂಡಿದ್ದಾರೆ. ನಾವು ಸಾಂಕ್ರಾಮಿಕ ತಡೆಗೆ ಕೈಗೊಂಡ ಕ್ರಮಗಳನ್ನು ವಿಶ್ವದ ಹಲವು ದೇಶಗಳ ಗಣ್ಯರು ಶ್ಲಾಘಿಸಿದ್ದಾರೆ ಎಂದರು.