ವಾಷಿಂಗ್ಟನ್, ಅ.24 (DaijiworldNews/PY): ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯರನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಾದ ಜೊ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಅವರು ಉತ್ತಮವಾಗಿ ತಿಳಿದುಕೊಂಡಿದ್ದಾರೆ. ಆದರೆ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಟೀಕಿಸುತ್ತಾರೆ. ಅವರು ನಮ್ಮ ಪಾಲಿನ ವೈರಿ ಎಂದು ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರು ತಿಳಿಸಿದ್ದಾರೆ.
ಜೊ ಬಿಡೆನ್ ಅವರು ಅಮೇರಿಕಾದ ಉಪಾಧ್ಯಕ್ಷರಾಗಿದ್ದ ಸಂದರ್ಭ ಅವರು ಭಾರತೀಯರಿಗೆ ನೆರವಾಗಿದ್ದರು. ಈ ಹಿನ್ನೆಲೆ ನವೆಂಬರ್ 3ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಯ ವೇಳೆ ಜೊ ಬಿಡೆನ್ ಅವರಿಗೆ ಬೆಂಬಲ ನೀಡುವುದಾಗಿ ತೀರ್ಮಾನ ಮಾಡಿದ್ದಾಗಿ ಭಾರತೀಯರು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಆಡಳಿತದ ನಾಲ್ಕು ವರ್ಷಗಳ ನಂತರ ಕೂಡಾ ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ನಮಗೆ ದೊರಕಿದಷ್ಟು ಅವಕಾಶಗಳು ದೊರಕಿಲ್ಲ. ಮುಂಬರುವ ದಿನಗಳಲ್ಲಿ ನಮ್ಮ ಸಮುದಾಯ ಸೇರಿದಂತೆ, ನಮ್ಮ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವ, ನಮ್ಮ ಕಠಿಣ ಶ್ರಮವನ್ನು ಮೆಚ್ಚುವ ಹಾಗೂ ಸಮಾನ ಅವಕಾಶವನ್ನು ಕಲ್ಪಿಸುವ ನೀಡುವಂತ ನಾಯಕ ಬೇಕು ಎಂದು ಸಿಲಿಕಾನ್ ವ್ಯಾಲಿ ಮೂಲದ ಉದ್ಯಮಿ ಅಜಯ್ ಜೈನ್ ಭುಟೋರಿಯಾ ತಿಳಿಸಿದರು.
ಈಗಿರುವ ಅವ್ಯವಸ್ಥೆಯಿಂದ ದೇಶವನ್ನು ಪಾರು ಮಾಡಿ ಅದನ್ನು ಪುನಃಸ್ಥಾಪಿಸುವ, ಮಧ್ಯಮ ವರ್ಗದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ, ವಿಶ್ವ ವೇದಿಕೆಯಲ್ಲಿ ಅಮೇರಿಕಾದ ನಾಯಕತ್ವವನ್ನು ಪುನಃ ಸ್ಥಾಪಿಸುವ ಹಾಗೂ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ನಾಯಕರು ಬಿಡೆನ್ ಹಾಗೂ ಹ್ಯಾರಿಸ್ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಹಾಗೂ ಬಿಡೆನ್ ಅವರ ನಡುವೆ ಶುಕ್ರವಾರ ನಡೆದ ಅಂತಿಮ ಅಧ್ಯಕ್ಷೀಯ ಚರ್ಚೆಯನ್ನು ಉಲ್ಲೇಖಸಿದ ಭುಟೋರಿಯಾ ವರು, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಟೀಕಿಸಿದ್ದಾರೆ ಎಂದರು.