ಕ್ಯಾಲಿಪೋರ್ನಿಯಾ, ಅ.28 (DaijiworldNews/PY): ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭೀಕರವಾದ ಕಾಡ್ಗಿಚ್ಚು ಸಂಭವಿಸಿ ಭಾರೀ ಪ್ರಮಾಣದಲ್ಲಿ ಅರಣ್ಯ ನಾಶವಾಗಿದೆ.
ಈ ಕಾಡ್ಗಿಚ್ಚು ಮಂಗಳಾರದಂದು ಸಂಭವಿಸಿದ್ದು ಇಂದು ಕೂಡಾ ಮುಂದುವರೆದಿದೆ. ಘಟನಾ ಸ್ಥಳದಿಂದ ಸುಮಾರು 90,000ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲು ತಿಳಿಸಲಾಗಿದೆ. ಭಾರೀ ಪ್ರಮಾಣ ಕಾಡ್ಗಿಚ್ಚು ಸಂಭವಿಸಿದ ಪರಿಣಾಮ 15,200 ಎಕರೆ ಮೀರಿ ಕಾಡ್ಗಿಚ್ಚು ವ್ಯಾಪಿಸಿದೆ.
ಘಟನಾ ಸ್ಥಳದಲ್ಲಿ ಸಮುದ್ರ ಕೂಡಾ ಇದ್ದು, ಸಮುದ್ರದಿಂದ ಬೀಸುವ ಗಾಳಿಗೆ ಕಾಡ್ಗಿಚ್ಚು ಮತ್ತಷ್ಟು ವ್ಯಾಪಕವಾಗಿ ಹರಡಿದೆ. ಕಾಡ್ಗಿಚ್ಚು ಸಂಭವಿಸಿದ ಸ್ಥಳದಲ್ಲಿ ನೆಲೆಸಿದ್ದ ಲಕ್ಷಾಂತರ ಮಂದಿಯನ್ನು ಸುತಕ್ಷಿತವಾದ ಸ್ಥಳಕ್ಕೆ ರವಾನಿಸಲು ಸೂಚನೆ ನೀಡಲಾಗಿದೆ. ಇನ್ನೊಂದೆಡೆ ಲಾಂಸ್ ಎಂಜಲೀಸ್ನಿಂದ ಕೂಡಾ ಎನ್ಎಫ್ಎಲ್ ಫುಟ್ಬಾಲ್ ಆಟಗಾರರು ಸೇರಿದಂತೆ ಸಾವಿರಾರು ಮಂದಿಯನ್ನು ಸುರಕ್ಷಿತವಾದ ಸ್ಥಳಗಳಿಗೆ ರವಾನಿಸುವ ಕಾರ್ಯವಾಗುತ್ತಿದೆ.
ಘಟನಾ ಸ್ಥಳದಲ್ಲಿ ನೂರಾರು ಅಗ್ನಿಶಾಮಕ ವಾಹನಗಳು ಸೇರಿದಂತೆ ರಕ್ಷಣಾ ಸಿಬ್ಬಂದಿ, ಅಧಿಕಾರಿಗಳು ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಕೂಡಾ ಕಾಡ್ಗಿಚ್ಚು ಸಂಭವಿಸಿದ ಪರಿಣಾಮ ಲಕ್ಷಾಂತರ ಮಂದಿ ಆಪತ್ತಿಗೊಳಗಾಗಿದ್ದು, ನೂರಾರು ಮಂದಿ ಮೃತಪಟ್ಟಿದ್ದರು. ಅಲ್ಲದೇ, ಕಾಡು ಪ್ರಾಣಿ-ಪಕ್ಷಿಗಳು ಕೂಡಾ ಸಾವನ್ನಪ್ಪಿವೆ.
ಈ ಬಗ್ಗೆ ಅಧಿಕಾರಿಗಳು ಸಲ್ಲಿಸಿರುವ ಪ್ರಾಥಮಿಕ ವರದಿಯ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕಾಡ್ಗಿಚ್ಚು ಸಂಭವಿಸಿದೆ ಎಂದು ಶಂಕಿಸಲಾಗಿದೆ. ಈ ಭಾಗದಲ್ಲಿ ಲಕ್ಷಾಂತರ ಮನೆಗಳಿದ್ದು, ವಿದ್ಯುತ್ ಸಂಪರ್ಕ ಕೂಡಾ ಇರುವ ಕಾರಣ ಕಾಡ್ಗಿಚ್ಚಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಅನುಮಾನಿಸಲಾಗಿದೆ. ಆದರೆ, ಆ ಪ್ರದೇಶದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕಾಡ್ಗಿಚ್ಚು ಸಂಭವಿಸಿದೆ ಎನ್ನುವ ಖಚಿತ ಮಾಹಿತಿ ದೊರೆತಿಲ್ಲ ಎಂದು ಅಧಿಕಾರಿಳು ಹೇಳಿದ್ದಾರೆ.
ಕಾಡ್ಗಿಚ್ಚನ್ನು ನಂದಿಸಲು ಅಧಿಕಾರಿಗಳು, ರಕ್ಷಣಾ ಸಿಬ್ಬಂದಿಗಳು ಸೇರಿದಂತೆ ಸುಮಾರು 1800 ಮಂದಿ ಹರಸಾಹಸ ಪಡುತ್ತಿದ್ದಾರೆ. ಬೆಂಜ ನಂದಿಸುವ ಕಾರ್ಯದ ಸಂದರ್ಭ ಇಬ್ಬರು ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ತೀವ್ರವಾದ ಗಾಯವಾಗಿದೆ ಎಂದು ತಿಳಿದುಬಂದಿದೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವನ್ಮರಣ ಹೋರಾಟದಲ್ಲಿದ್ದಾರೆ ಎನ್ನಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಕಾಡ್ಗಿಚ್ಚು ಸಂಭವಿಸಿದೆ ಎಂದು ಶಂಕಿಸಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕ್ಯಾಲಿಫೋರ್ನಿಯಾದಲ್ಲಿ ವಿದ್ಯುತ್ ಸೇವೆ ಸ್ಥಗಿತಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.