ಇಸ್ಲಾಮಾಬಾದ್,ಅ.30 (DaijiworldNews/HR): ಪುಲ್ವಾಮಾ ದಾಳಿ ನಾವೇ ಮಾಡಿಸಿದ್ದು, ಇಮ್ರಾನ್ ಖಾನ್ ನಾಯಕತ್ವದಲ್ಲಿ ನಡೆದ ಪುಲ್ವಾಮಾ ದಾಳಿಯ ಯಶಸ್ಸು ಇಡೀ ಪಾಕಿಸ್ಥಾನದ ಯಶಸ್ಸು ಎಂದು ಹೇಳಿಕೊಂಡಿದ್ದ ಪಾಕ್ ಸಚಿವ ಫವಾದ್ ಚೌಧರಿ ಇದೀಗ ತಾನು ಹಾಗೆ ಹೇಳಿಕೊಂಡಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಈ ಕುರಿತು ಮಾತನಾಡಿದ ಪಾಕ್ ಸಚಿವ ಫವಾದ್ ಚೌಧರಿ, ನನ್ನ ಹೇಳಿಕೆಯನ್ನು ಹೇಗೆ ತಿರುಚಲಾಗಿದ್ದು, ನನಗೆ ಆಶ್ಚರ್ಯವಾಯಿತು. ಇದು ಹಾಸ್ಯಾಸ್ಪದ. ನಾನು ಫೆಬ್ರವರಿ 26, 2019 ರ ನಂತರ ನಡೆದ ಘಟನೆಗಳನ್ನು ಉಲ್ಲೇಖಿಸುತ್ತಿದ್ದೆ. ನನ್ನ ಭಾಷಣವನ್ನು ಪೂರ್ಣವಾಗಿ ಕೇಳಬೇಕೆಂದು ಎಲ್ಲರಿಗೂ ಸಲಹೆ ನೀಡುತ್ತೇನೆ ಎಂದರು.
ಇನ್ನು ಪಾಕ್ ಸಂಸತ್ನಲ್ಲಿ ಫವಾದ್ ಚೌಧರಿ, ಭಾರತದ ನೆಲದಲ್ಲೇ ನಾವು ಅವರನ್ನು ಹೊಡೆದುರುಳಿಸಿದೆವು. ಇಮ್ರಾನ್ ನಾಯಕತ್ವದಲ್ಲಿ ಪುಲ್ವಾಮಾ ದಾಳಿಯ ನಮ್ಮ ಯಶಸ್ಸು, ಇಡೀ ಪಾಕಿಸ್ಥಾನೀಯರ ಯಶಸ್ಸು. ನೀವು ಮತ್ತು ನಾವು ಕೂಡ ಈ ಯಶಸ್ಸಿನಲ್ಲಿ ಭಾಗಿಯಾಗಿದ್ದೇವೆ ಎಂದು ಹೇಳಿಕೊಂಡಿದ್ದರು.
ಆದರೆ ಟಿವಿ ಚರ್ಚೆಯಲ್ಲಿ ಸಚಿವ ಫವಾದ್, ಭಾರತದಲ್ಲಿ ರಾಜಕೀಯ ಲಾಭಕ್ಕಾಗಿ ತನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ.