ವಾಷಿಂಗ್ಟನ್, ಅ.30 (DaijiworldNews/PY): "ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯು ಅಮೇರಿಕಾದ ಕನಸು ಹಾಗೂ ಸಮಾಜವಾದಿ ದುಃಸ್ವಪ್ನದ ನಡುವಿನ ಆಯ್ಕೆಯಾಗಿದೆ" ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟಾಂಪಾದಲ್ಲಿ ನಡೆದ ಚುನಾವಣಾ ರ್ಯಾಲಿಯ ಸಂದರ್ಭ ತಮ್ಮ ಬೆಂಬಗಲಿಗರನ್ನುದ್ದೇಶಿಸಿ ಮಾತನಾಡಿದ ಅವರು, "ಅಮೇರಿಕಾದ ಅಧ್ಯಕ್ಷೀಯ ಚುನಾವಣಾ ಇತಿಹಾಸದಲ್ಲಿ ಈ ಬಾರಿ ಸ್ಪರ್ಧಿಸುತ್ತಿರುವ ಜೊ ಬಿಡೆನ್ ಕೆಟ್ಟ ಅಭ್ಯರ್ಥಿ" ಎಂದಿದ್ದಾರೆ.
"ಒಂದು ವೇಳೆ ಬಿಡೆನ್ ಅವರು ಅಧ್ಯಕ್ಷ ಸ್ಥಾನಕ್ಕೇರಿದರೆ ವೆನಿಜುವೆಲಾದ ರೀತಿ ಅಮೇರಿಕದಲ್ಲೂ ಕೂಡಾ ಆಂತರಿಕೆ ಕ್ಷೋಭೆ ಸೃಷ್ಠಿಯಾಗಿ ಆಡಳಿತ ಯಂತ್ರವೇ ಕುಸಿದು ಬೀಳಲಿದೆ" ಎಂದು ಹೇಳಿದ್ದಾರೆ.
"ನಾನು ಅಧ್ಯಕ್ಷನಾಗಿ ಇರುವಲ್ಲಿ ತನಕ ಅಮೇರಿಕಾವನ್ನು ಎಂದಿಗೂ ಸಮಾಜವಾದಿ ರಾಷ್ಟ್ರವನ್ನಾಗಿಸಲು ಬಿಡುವುದಿಲ್ಲ" ಎಂದಿದ್ದಾರೆ.
"ಸೋಲು, ಗೆಲುವು ಹಾಗೂ ಡ್ರಾ ವಿಚಾರವಾಗಿ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅಮೇರಿಕಾದ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಟ್ಟ ಅಭ್ಯರ್ಥಿಯೋರ್ವ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.
"ಇನ್ನು ಕೇವಲ ಐದೇ ದಿನಗಳು ಬಾಕಿ ಉಳಿದಿವೆ. ಈ ನಿಟ್ಟಿನಲ್ಲಿ ನಾವು ಫ್ಲೋರಿಡಾದ ಜನತೆಯ ಮನಗೆಲ್ಲುತ್ತೇವೆ. ಇನ್ನೂ ನಾಲ್ಕು ವರ್ಷಗಳ ಕಾಲ ನಾವು ಶ್ವೇತಭವನದ ಆಳ್ವಿಕೆ ನಡೆಸುತ್ತೇವೆ. ನಾವು ಹಿಸ್ಪಾನಿಕ್ ಹಾಗೂ ಅಮೇರಿಕನ್ನರ ಮತಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸುತ್ತೇವೆ" ಎಂದಿದ್ದಾರೆ.